ಡೈಲಿವಾರ್ತೆ:20ಮಾರ್ಚ್/2026

ಕಾರ್ಕಳ: ಟಿಪ್ಪರ್ ಡಿಕ್ಕಿ- ಬೈಕ್ ಸವಾರ ಸಾವು

​ಕಾರ್ಕಳ: ಅತಿ ವೇಗವಾಗಿ ಬಂದ ಟಿಪ್ಪರ್ ಲಾರಿಯೊಂದು ಬೈಕ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದ ಭೀಕರ ಅಪಘಾತದಲ್ಲಿ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ಕಾರ್ಕಳದ ಪಳ್ಳಿ ಅಡಪಾಡಿ ಬಳಿ ಸಂಭವಿಸಿದೆ.

​ಹಿರಿಯಡ್ಕದ ಕುಜಂಬೈಲು ನಿವಾಸಿ ಗಣೇಶ್ ನಾಯಕ್ (27) ಮೃತಪಟ್ಟ ದುರ್ದೈವಿ ಎಂದು ಗುರುತಿಸಲಾಗಿದೆ.

​ಮೃತ ಗಣೇಶ್ ನಾಯಕ್ ಅವರು ತಮ್ಮ ಮೋಟಾರ್ ಸೈಕಲ್‌ನಲ್ಲಿ ಹಂಪನಕಟ್ಟೆ ಕಡೆಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಅಡಪಾಡಿ ಸಮೀಪ ಹಿಂಬದಿಯಿಂದ ಅತೀ ವೇಗ ಮತ್ತು ಅಜಾಗರೂಕತೆಯಿಂದ ಬಂದ ಟಿಪ್ಪರ್ ಲಾರಿಯು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಗಣೇಶ್ ಅವರು ಬೈಕ್ ಸಮೇತ ರಸ್ತೆಗೆ ಬಿದ್ದಿದ್ದಾರೆ.
​ದುರದೃಷ್ಟವಶಾತ್, ಬಿದ್ದ ಗಣೇಶ್ ಅವರ ತಲೆಯ ಮೇಲೆ ಟಿಪ್ಪರ್ ಲಾರಿಯ ಹಿಂಬದಿಯ ಚಕ್ರ ಹರಿದಿದೆ. ಗಣೇಶ್ ಅವರು ಹೆಲ್ಮೆಟ್ ಧರಿಸಿದ್ದರೂ ಸಹ, ಟಿಪ್ಪರ್ ಚಕ್ರ ತಲೆಯ ಮೇಲೇ ಹರಿದ ಪರಿಣಾಮ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

​ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯರು ಜಮಾಯಿಸಿದ್ದು, ಟಿಪ್ಪರ್ ಚಾಲಕನ ಬೇಜವಾಬ್ದಾರಿತನದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಕಾರ್ಕಳ ನಗರ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.