

ಡೈಲಿವಾರ್ತೆ:20ಮಾರ್ಚ್/2026


ಕೋಟ ಜಾಮಿಯಾ ಮಸ್ಜಿದ್ ನಲ್ಲಿ “ರಂಜಾನ್ ಈದ್ ಸಂದೇಶ” ಹಾಗೂ “ಅರ್ಹರಿಗೆ ಸಹಾಯಧನ” ವಿತರಣೆ:
ಮಾನವೀಯತೆಯೇ ಧರ್ಮದ ಮೂಲ: ಇದ್ರಿಸ್ ಹೂಡೆ

ಕೋಟ: ಸ್ಥಳೀಯ ಜಾಮಿಯಾ ಮಸ್ಜಿದ್ ಕೋಟ ಇದರ ವತಿಯಿಂದ “ರಮದಾನ್ ಈದ್ ಸಂದೇಶ 2026 ಮತ್ತು ಅರ್ಹರಿಗೆ ಸಹಾಯಧನ ವಿತರಣೆ” ಕಾರ್ಯಕ್ರಮವು ದಿನಾಂಕ 20/03/2026 ರಂದು ಕೋಟ ಜಾಮಿಯಾ ಮಸ್ಜಿದ್ ಆವರಣದಲ್ಲಿ ಮೌಲಾನ ಸಮೀಉರ್ರಾಹಮನ್ ಅವರ ಖಿರಾತ್ ನೊಂದಿಗೆ ಯಶಸ್ವಿಯಾಗಿ ಜರುಗಿತು.
ಮಾನವೀಯತೆಯೇ ಧರ್ಮದ ಮೂಲ: ಇದ್ರಿಸ್ ಹೂಡೆ

ಕಾರ್ಯಕ್ರಮಕ್ಕೆ ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಹೂಡೆ ಐಡಿಯಲ್ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷರಾದ ಇದ್ರಿಸ್ ಹೂಡೆರವರು ಈದ್ ಸಂದೇಶ ನೀಡಿ “ರಂಜಾನ್ ಕೇವಲ ಉಪವಾಸದ ತಿಂಗಳಲ್ಲ, ಅದು ಪವಿತ್ರ ಕುರಾನ್ ಅವತೀರ್ಣಗೊಂಡ ಮಾಸ. ಕುರಾನ್ ಮನುಕುಲಕ್ಕೆ ಮಾರ್ಗದರ್ಶಕವಾಗಿದ್ದು, ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯಲು ಪ್ರೇರೇಪಿಸುತ್ತದೆ. ನಾವು ಮಾಡುವ ಆರಾಧನೆಗಳು ಕೇವಲ ದೈಹಿಕವಾಗಿರದೆ, ಆಧ್ಯಾತ್ಮಿಕ ಉನ್ನತಿಗೆ ಮತ್ತು ಸಮಾಜದ ಕಷ್ಟಗಳಿಗೆ ಸ್ಪಂದಿಸುವಂತಿರಬೇಕು,” ಎಂದು ಅವರು ತಿಳಿಸಿದರು.
ಮುಂದುವರಿದು ಮಾತನಾಡಿದ ಅವರು, “ಜಕಾತ್ ಎಂಬುದು ದಾನವಲ್ಲ, ಅದು ಶ್ರೀಮಂತರ ಸಂಪತ್ತಿನಲ್ಲಿ ಬಡವರಿಗಿರುವ ಹಕ್ಕು. ಪ್ರತಿಯೊಬ್ಬ ಮುಸ್ಲಿಮನು ತನ್ನ ಸಂಪತ್ತಿನ ಒಂದು ಪಾಲನ್ನು ಕಡ್ಡಾಯವಾಗಿ ಅರ್ಹರಿಗೆ ನೀಡುವ ಮೂಲಕ ಸಾಮಾಜಿಕ ಸಮಾನತೆಯನ್ನು ಕಾಪಾಡಬೇಕು. ಹಬ್ಬದ ಸಂತೋಷವು ನಮ್ಮ ನೆರೆಹೊರೆಯವರ ಹಸಿವು ನೀಗಿಸಿದಾಗ ಮಾತ್ರ ಸಾರ್ಥಕವಾಗುತ್ತದೆ,” ಎಂದರು.
ಜಾತಿ-ಮತ ಮೀರಿ ಸಮಾಜದ ಕಡುಬಡವರ ಸೇವೆ ಶ್ಲಾಘನೀಯ: ಸತೀಶ್ ಕುಂದರ್ ಬಾರಿಕೆರೆ

ಜಾಮಿಯಾ ಮಸ್ಜಿದ್ ಕೋಟ ಇದರ ವತಿಯಿಂದ ಹಮ್ಮಿಕೊಳ್ಳಲಾಗುವ ರಂಜಾನ್ ಸಹಾಯಧನ ವಿತರಣಾ ಕಾರ್ಯಕ್ರಮವು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗದೆ, ಸರ್ವ ಧರ್ಮದ ಅಶಕ್ತರನ್ನು ಗುರುತಿಸಿ ನೆರವಾಗುತ್ತಿರುವುದು ಭಾವೈಕ್ಯತೆಗೆ ಸಾಕ್ಷಿಯಾಗಿದೆ,” ಎಂದು ಕೋಟತಟ್ಟು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸತೀಶ್ ಕುಂದರ್ ಬಾರಿಕೆರೆ ಅವರು ಅಭಿಪ್ರಾಯಪಟ್ಟರು.
ಮಾನವೀಯತೆ ಮತ್ತು ಶಿಸ್ತಿನ ಸಂದೇಶ: ಆರ್. ರವೀಂದ್ರ ರಾವ್

“ರಂಜಾನ್ ಆಚರಣೆಯು ದೇಹ ಮತ್ತು ಮನಸ್ಸನ್ನು ಒಗ್ಗೂಡಿಸುವ ಒಂದು ಪವಿತ್ರ ಪ್ರಕ್ರಿಯೆ. ದೇಹಕ್ಕೆ ದಂಡನೆ ಹಾಗೂ ಮನಸ್ಸಿಗೆ ಪ್ರಾರ್ಥನೆ ನೀಡುವ ಮೂಲಕ ಜಡತ್ವವನ್ನು ಹೋಗಲಾಡಿಸಿ, ಸಮಾಜದಲ್ಲಿ ದಾನ-ಧರ್ಮದಂತಹ ಸತ್ಕರ್ಮಗಳನ್ನು ಮಾಡಲು ಈ ಮಾಸ ಪ್ರೇರಣೆ ನೀಡುತ್ತದೆ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಇಂತಹ ಕಾರ್ಯಕ್ರಮಗಳು ಪ್ರಜಾಪ್ರಭುತ್ವದ ವ್ಯವಸ್ಥೆಗೆ ಪೂರಕವಾಗಿವೆ,” ಎಂದು ಕೋಟತಟ್ಟು ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಆರ್. ರವೀಂದ್ರ ರಾವ್,
ಶ್ಲಾಘಿಸಿದರು.

ಕೋಟ ಪಂಚಾಯತ್ ಮಾಜಿ ಅಧ್ಯಕ್ಷೆ ಜ್ಯೋತಿ ಭರತ್ ಕುಮಾರ್ ಶೆಟ್ಟಿ ಮಾತನಾಡಿ, “ಉಪವಾಸವು ದೇವರ ಸಾನಿಧ್ಯವನ್ನು ಗಳಿಸುವ ಅತ್ಯುತ್ತಮ ಮಾರ್ಗ. ಈ ಮಸೀದಿಯೊಂದಿಗೆ ನಮಗೆ ದಶಕಗಳ ಹಳೆಯ ಸಂಬಂಧವಿದ್ದು, ಇಲ್ಲಿನ ಸೌಹಾರ್ದಯುತ ಬಾಂಧವ್ಯವು ಸದಾ ಮಾದರಿಯಾಗಿದೆ,” ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಾಮಿಯಾ ಮಸ್ಜಿದ್ ಅಧ್ಯಕ್ಷರಾದ ಕೋಟ ಇಬ್ರಾಹಿಂ ಸಾಹೇಬ್ ಅವರು ಮಾತನಾಡಿ, “ಕೋಟ ಎಂಬುದು ಇಡೀ ಪ್ರಪಂಚದಲ್ಲೇ ಹೆಸರಾದ ಊರು. ಇಲ್ಲಿನ ಸಹೋದರತೆ ಮತ್ತು ಪರಂಪರೆ ನಿರಂತರವಾಗಿ ಮುಂದುವರಿಯಬೇಕು. ಯುವಜನತೆಯು ಇದೇ ಮಾದರಿಯನ್ನು ಅನುಸರಿಸಿ ಸಮಾಜದ ಏಳಿಗೆಗೆ ಶ್ರಮಿಸಬೇಕು,” ಎಂದು ಆಶಿಸಿದರು.



ಸಹಾಯಧನ ಹಾಗೂ ಸವಲತ್ತುಗಳ ವಿತರಣೆ:
ಈ ಸಂದರ್ಭದಲ್ಲಿ ವಿವಿಧ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಸಹಾಯಧನ ಹಾಗೂ ಸವಲತ್ತುಗಳನ್ನು ವಿತರಿಸಲಾಯಿತು.
ಫಲಾನುಭವಿಗಳಾದ: ರಾಘವ ಪೂಜಾರಿ, ಅಶೋಕ್ ಕುಮಾರ್ ಒಳಮಾಡು, ಆನಂದ ಹರಿಜನ, ಸುಭಾಸ್ ಪೂಜಾರಿ, ಗಿರಿಜಾ ಪೂಜಾರ್ತಿ ಅವರಿಗೆ ನೆರವು ನೀಡಲಾಯಿತು.

ವಿಶೇಷ ಕೊಡುಗೆ: ಚಿಟ್ಟಿಬೆಟ್ಟು ಕೊರಗ ಕಾಲೋನಿಯ 8 ಮನೆಗಳಿಗೆ ಸಾಂಕೇತಿಕವಾಗಿ ಕುರ್ಚಿಗಳನ್ನು ವಿತರಿಸಲಾಯಿತು.


ಈ ಕಾರ್ಯಕ್ರಮದಲ್ಲಿ ಊರ ಹಿಂದೂ ಬಾಂಧವರು, ಜಮಾತ್ ಬಾಂಧವರು ಹಾಗೂ ಪಲಾನುಭವಿಗಳು ಭಾಗಿಯಾಗಿದ್ದರು.
ಕಾರ್ಯಕ್ರಮದಲ್ಲಿ ಜಾಮಿಯಾ ಮಸ್ಜಿದ್ ಯ ಪ್ರಧಾನ ಕಾರ್ಯದರ್ಶಿ ಬಶೀರ್ ಕೋಟ ನಿರೂಪಿಸಿದರು, ಆಸಿಫ್ ತೆಕ್ಕಟ್ಟೆ ವಂದಿಸಿದರು.