ಡೈಲಿವಾರ್ತೆ:20ಮಾರ್ಚ್/2026

ಉಡುಪಿ: ‘ಸಮಾಧಾನ ಮಹೋತ್ಸವ’ಕ್ಕೆ ಹಿಂದೂ ಜಾಗರಣಾ ವೇದಿಕೆ ವಿರೋಧ; ಪ್ರತಿಭಟನಾಕಾರರ ಬಂಧನ

​ಉಡುಪಿ: ನಗರದ ಮಿಷನ್ ಕಾಂಪೌಂಡ್‌ನಲ್ಲಿ ಮಾರ್ಚ್ 20ರಿಂದ 22ರವರೆಗೆ ಆಯೋಜಿಸಲಾಗಿರುವ ಮೂರು ದಿನಗಳ ‘ಸಮಾಧಾನ ಮಹೋತ್ಸವ’ ಕಾರ್ಯಕ್ರಮಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಿದ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ.

​ಶುಕ್ರವಾರದಂದು ಉಡುಪಿಯ ಗೋವಿಂದ ಕಲ್ಯಾಣ ಮಂಟಪದಲ್ಲಿ ಸಮಾವೇಶಗೊಂಡ ಹಿಂದೂ ಜಾಗರಣಾ ವೇದಿಕೆಯ ನೂರಾರು ಕಾರ್ಯಕರ್ತರು, ಸಮಾಧಾನ ಮಹೋತ್ಸವದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸಭೆಯ ಬಳಿಕ ಕಾರ್ಯಕರ್ತರು ಕಾರ್ಯಕ್ರಮ ನಡೆಯುತ್ತಿರುವ ಮಿಷನ್ ಕಾಂಪೌಂಡ್ ಮೈದಾನಕ್ಕೆ ಮುತ್ತಿಗೆ ಹಾಕಲು ಮೆರವಣಿಗೆಯ ಮೂಲಕ ತೆರಳಲು ಯತ್ನಿಸಿದರು.

​ಪ್ರತಿಭಟನಾಕಾರರು ಮೈದಾನದ ಕಡೆಗೆ ನುಗ್ಗದಂತೆ ತಡೆದ ಪೊಲೀಸರು, ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಕಾರ್ಯಕರ್ತರನ್ನು ವಶಕ್ಕೆ ಪಡೆದರು. ಬಳಿಕ ಅವರನ್ನು ಮಣಿಪಾಲ ಪೊಲೀಸ್ ಠಾಣೆಗೆ ಕರೆದೊಯ್ದು, ಸಂಜೆ ವೇಳೆಗೆ ಬಿಡುಗಡೆಗೊಳಿಸಿದರು.

​ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಉಡುಪಿ ನಗರ ಪೊಲೀಸ್ ಠಾಣೆಯ ಪ್ರಭಾರ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್ ಅವರ ನೇತೃತ್ವದಲ್ಲಿ ಮಿಷನ್ ಕಾಂಪೌಂಡ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭದ್ರತೆಯನ್ನು ಕೈಗೊಳ್ಳಲಾಗಿದ್ದು, ಸದ್ಯ ಪರಿಸ್ಥಿತಿ ಹತೋಟಿಯಲ್ಲಿದೆ