ಡೈಲಿ ವಾರ್ತೆ: 14/ಆಗಸ್ಟ್/ 2025

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌, ಪವಿತ್ರಾ ಗೌಡ ಸೇರಿ ಎಲ್ಲಾ ಆರೋಪಿಗಳ ಜಾಮೀನು ರದ್ದು

ನವದೆಹಲಿ: ನಟ ದರ್ಶನ್ ಅವರಿಗೆ ನಿಯಮಿತ ಜಾಮೀನು ನೀಡಿದ್ದ ಹೈಕೋರ್ಟ್ ಆದೇಶ ಪ್ರಶ್ನಿಸಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್ ಇಂದು ತನ್ನ ತೀರ್ಪು ಪ್ರಕಟಿಸಿತು. ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಆ‌ರ್. ಮಹಾದೇವನ್ ಅವರ ಪೀಠವು ತೀರ್ಪು ನೀಡಿದೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್, ಪವಿತ್ರಾಗೌಡ ಹಾಗೂ ಇತರೆ ಆರೋಪಿಗಳ ಜಾಮೀನು ಪ್ರಶ್ನಿಸಿ ಬೆಂಗಳೂರು ಪೊಲೀಸರು ಸಲ್ಲಿಸಿರುವ ಅರ್ಜಿ ವಿಚಾರಣೆ ನ್ಯಾ.ಜೆ ಬಿ ಪಾರ್ದಿವಾಲಾ ನೇತೃತ್ವದ ದ್ವಿಸದಸ್ಯ ಪೀಠದಲ್ಲಿ ನಡೆದಿತ್ತು. ವಾದ, ಪ್ರತಿವಾದ ಆಲಿಸಿದ್ದ ಪೀಠ ಆದೇಶವನ್ನು ಕಾಯ್ದಿರಿಸಿತ್ತು.

ದರ್ಶನ್ ಮತ್ತು ಇತರೆ ಆರು ಆರೋಪಿಗಳಿಗೆ ಜಾಮೀನು ನೀಡಿರುವ ಹೈಕೋರ್ಟ್ ಕ್ರಮಕ್ಕೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿತ್ತು. ಆದೇಶ ಹೊರಡಿಸಿದ ರೀತಿ ನೋಡಿದರೆ ಇದು ಖುಲಾಸೆಗೊಳಿಸುವ ಪ್ರಕರಣ ಎಂದು ನ್ಯಾಯಾಲಯ ನಿರ್ಧರಿಸಿದಂತೆ ಕಾಣುತ್ತಿದೆ’ ಎಂದು ಕಟುವಾಗಿ ಟೀಕಿಸಿತ್ತು. ಜುಲೈ 17ರಂದು ನಡೆದ ವಿಚಾರಣೆ ಸಂದರ್ಭದಲ್ಲಿ ಪೀಠವು, ‘ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತನ್ನ ವಿವೇಚನಾ ಅಧಿಕಾರವನ್ನು ಬಳಕೆ ಮಾಡಿರುವ ರೀತಿಯು ಸ್ವಲ್ಪವೂ ಒಪ್ಪುವಂತಿಲ್ಲ’ ಎಂದು ಹೇಳಿತ್ತು.

ಜುಲೈ 24 ರಂದು ನಡೆದ ಕೊನೆಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ, ನ್ಯಾಯಮೂರ್ತಿ ಆರ್. ಮಹದೇವನ್ ಅವರಿದ್ದ ಪೀಠ ನಿಮ್ಮ ವಾದ-ಪ್ರತಿವಾದವನ್ನು ಮೂರು ಪುಟಗಳಲ್ಲಿ ಸಂಕ್ಷಿಪ್ತವಾಗಿ ಒಂದು ವಾರದಲ್ಲಿ ತಿಳಿಸಿ ಎಂದು ಸೂಚಿಸಿದ್ದರು. ಅದರಂತೆ ಪವಿತ್ರಾ ಗೌಡ, ದರ್ಶನ್‌ ಮತ್ತು ಬೆಂಗಳೂರು ಪೊಲೀಸರ ಪರ ವಕೀಲರು ಲಿಖಿತ ರೂಪದಲ್ಲಿ ವಾದವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.