ಡೈಲಿ ವಾರ್ತೆ: 07/ಸೆ./2025

ಅರ್ಥಪೂರ್ಣವಾಗಿ ಶಿಕ್ಷಕರ ದಿನಾಚರಣೆ ಆಚರಿಸಿದ ಸುಜ್ಞಾನ ಎಜುಕೇಶನಲ್ ಟ್ರಸ್ಟ್:
ಗುರುವೇ ಮಕ್ಕಳ ಬದುಕಿಗೆ ದೀವಿಗೆ: ಡಾ.ಮಾಧವಿ ಎಸ್. ಭಂಡಾರಿ

ಕುಂದಾಪುರ: ಬ್ರಹ್ಮ ಜಗತ್ತನ್ನು ಸೃಷ್ಟಿಸುತ್ತಾನೆ. ನಂತರ, ಗುರುವೆಂಬ ಪರಬ್ರಹ್ಮ ಮಕ್ಕಳ ಬದುಕಿಗೆ ದೀವಿಗೆಯಾಗುತ್ತಾನೆ ಎಂದು ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ.ಮಾಧವಿ ಎಸ್. ಭಂಡಾರಿ ಶನಿವಾರ ನುಡಿದರು.

ಯಡಾಡಿ ಮತ್ಯಾಡಿಯಲ್ಲಿರುವ ಸುಜ್ಞಾನ ಪದವಿಪೂರ್ವ ಕಾಲೇಜು ಹಾಗೂ ವಿದ್ಯಾರಣ್ಯ ಆಂಗ್ಲಮಾಧ್ಯಮ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ನಿಮಿತ್ತ ಏರ್ಪಡಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಅವರು ಮಾತನಾಡಿದರು.

ನಮ್ಮ ಬದುಕಿನಲ್ಲಿ ಹೆತ್ತ ತಾಯಿ ಮೊದಲ ಗುರು. ಸತ್ಯ, ಧರ್ಮ, ನ್ಯಾಯ ನೀತಿಯ ಬಗ್ಗೆ ಮನೆಯಲ್ಲಿ ಮಕ್ಕಳಿಗೆ ತಿಳಿಸಿಕೊಡುವವಳು ತಾಯಿ. ತದನಂತರ ಮಕ್ಕಳ ಭವಿಷ್ಯ ಶಿಕ್ಷಕರ ಕೈಯಲ್ಲಿರುತ್ತದೆ. ಗುರುವು ತ್ರಿಮೂರ್ತಿಗಳ ಸ್ವರೂಪ ಎಂದು ವಿವರಿಸಿದರು.ಇನ್ನು ಶಿಕ್ಷಕರು ಕೂಡ ಮಕ್ಕಳ ಜೊತೆ ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳಬೇಕು. ಮಕ್ಕಳಿಗೆ ಜೀವನದ ಮೌಲ್ಯ ಕಲಿಸಿಕೊಡಬೇಕು ಎಂದು ಕಿವಿಮಾತು ನುಡಿದರು.

ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಅವರು ಮಾತನಾಡಿ, “ಶಿಕ್ಷಕರನ್ನು ಶಿಲ್ಪಿಗಳೆಂದು ಕರೆಯುತ್ತಾರೆ. ಸಮಾಜವನ್ನು ತಿದ್ದುವವರು ಶಿಕ್ಷಕರು. ತಾವು ಕಲಿಸಿದ ವಿದಾರ್ಥಿಗಳು ಉನ್ನತ ಸ್ಥಾನಕ್ಕೆ ಹೋದಾಗ ಹೆತ್ತವರಿಗಿಂತ ಹೆಚ್ಚು ಖುಷಿ ಪಡುವವರು ಶಿಕ್ಷಕರೇ ಆಗಿರುತ್ತಾರೆ. ಇಂದಿನ ಮಕ್ಕಳು ಸೋಶಿಯಲ್ ಮೀಡಿಯಾಕ್ಕೆ ಜೋತು ಬಿದ್ದಿದ್ದಾರೆ. ಶಿಕ್ಷಕರು ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಲು ಪ್ರೇರೇಪಿಸಬೇಕು” ಎಂದರು.

ಸಂಸ್ಥೆಯ ಖಜಾಂಚಿ ಭರತ್ ಶೆಟ್ಟಿ ಮಾತನಾಡಿ, ಯಾವುದೇ ವ್ಯಕ್ತಿಯು ಸನ್ಮಾರ್ಗದಲ್ಲಿ ಸಾಗಬೇಕಾದರೆ ಒಬ್ಬ ಗುರುವಿನ ಮಾರ್ಗದರ್ಶನ ಅಗತ್ಯ; ಹಾಗೆಯೇ, ನಮ್ಮ ಸಂಸ್ಕೃತಿಯಲ್ಲಿ ಗುರುವಿಗೆ ಶ್ರೇಷ್ಠ ಸ್ಥಾನವಿದೆ. ಆದರೆ ಇವತ್ತಿನ ದಿನಗಳಲ್ಲಿ ಈ ಗುರು-ಶಿಷ್ಯರ ಬಾಂಧವ್ಯದಲ್ಲಿ ಕೊರತೆ ಕಂಡುಬರುತ್ತಿದ್ದು, ಇದು ಬೆಳೆಯಲು ಆಸ್ಪದ ನೀಡಬಾರದು ಎಂದು ಹೇಳಿದರು.

ಸಂಸ್ಥೆಯ ಅಧ್ಯಕ್ಷ ಡಾ. ರಮೇಶ್ ಶೆಟ್ಟಿ ಮಾತನಾಡಿ, “ದೇಶ ಕಟ್ಟುವ ವಿದ್ಯಾರ್ಥಿಗಳ ಜೀವನವನ್ನು ರೂಪಿಸುವ ದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲಿದೆ. ನಮ್ಮ ದೇಶದಲ್ಲಿ ಶಿಕ್ಷಕರಿಗೆ ಉನ್ನತ ಗೌರವಾದರಗಳಿವೆ. ಅದನ್ನು ಉಳಿಸಿಕೊಳ್ಳಬೇಕಾದ ಹೊಣೆಗಾರಿಕೆ ಶಿಕ್ಷಕರದ್ದಾಗಿದೆ.ಇಂದಿನ ಡಿಜಿಟಲ್ ಯುಗದಲ್ಲಿ ವಿದ್ಯಾರ್ಥಿಗಳು ಹೆಚ್ಚು ಚುರುಕಾಗಿದ್ದಾರೆ; ಅದಕ್ಕೆ ತಕ್ಕಂತೆ ಶಿಕ್ಷಕರು ತಮ್ಮ ಜ್ಞಾನ ದಿಗಂತವನ್ನು ವಿಸ್ತರಿಸಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು. ಹಾಗೇ ನಮ್ಮ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಯು ವೈದ್ಯಕೀಯ ಅಥವಾ ಐಐಟಿ ಸೀಟು ಪಡೆದ ಸಂದರ್ಭದಲ್ಲಿ, ಸಂಸ್ಥೆಯ ವತಿಯಿಂದ ಪ್ರತಿ ವಿದ್ಯಾರ್ಥಿಯ ಪರವಾಗಿ ರೂ 5,000ದಂತೆ ಭಾರತೀಯ ಸೇನಾ ನಿಧಿಗೆ ಕೊಡುಗೆ ನೀಡಲಾಗುವುದು ಇದು ದೇಶ ರಕ್ಷಕರಿಗೆ ನಮ್ಮ ಸಂಸ್ಥೆಯ ಸಣ್ಣ ಕೊಡುಗೆಯಾಗಿದೆ” ಎಂದು ಹೇಳಿದರು.

*ಅಗಲಿದ ಶಿಕ್ಷಕ ಸಂತೋಷ್ ಕುಟುಂಬಕ್ಕೆ 10 ಲಕ್ಷ ರೂ. ಧನ ಸಹಾಯ; ಹೃದಯ ವೈಶಾಲ್ಯತೆ ಮೆರೆದ ಸುಜ್ಞಾನ ಎಜುಕೇಶನಲ್ ಟ್ರಸ್ಟ್

ಇದೇ ವೇಳೆ, ಇತ್ತೀಚೆಗೆ ವಿಧಿಯ ಕೈವಾಡಕ್ಕೆ ಸಿಲುಕಿ ಇಹಲೋಕವನ್ನು ತ್ಯಜಿಸಿದ ಸಂಸ್ಥೆಯ ಶಿಕ್ಷಕರಾದ ಸಂತೋಷ್ ಅವರ ಕುಟುಂಬಕ್ಕೆ 10 ಲಕ್ಷ ರೂಪಾಯಿಗಳ ಆರ್ಥಿಕ ನೆರವು ನೀಡಲಾಯಿತು*. *ಈ ಹಣವನ್ನು ಮೃತರ ಪತ್ನಿ ಜಯಶ್ರೀ ಅವರ ಹೆಸರಿನಲ್ಲಿ ಠೇವಣಿ ಇಡಲಾಯಿತು.* ಇನ್ನು ಶಿಕ್ಷಕ ಸಂತೋಷ್ ಅವರು ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದರು.ವಿದ್ಯಾರ್ಥಿಗಳಿಗೆ ಕನ್ನಡದ ಕಂಪನ್ನು ಪಸರಿಸಿ ಭಾಷೆಯನ್ನು ಕಲಿಸಿ ಪ್ರೀತಿಯನ್ನು ಉಣಬಡಿಸಿದ ಶ್ರೇಷ್ಠ ಗುರುವಾಗಿದ್ದರು. ತಮ್ಮ ಪಾಠ-ಪ್ರವಚನಗಳ ಮೂಲಕ ಹಲವು ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾಗಿದ್ದರು.ಅದು ಅಲ್ಲದೇ ಅನೇಕ ಸಂಘ ಸಂಸ್ಥೆಗಳಲ್ಲಿ ಅವಿರತ ಶ್ರಮ ವಹಿಸಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದರು.ಅನೇಕ ಸಂಘ ಸಂಸ್ಥೆಗಳಲ್ಲಿ ಮುಂಚೂಣಿಯಲಿದ್ದರು.ತಮ್ಮ ಸರಳ-ಸಜ್ಜನ-ಸುಂದರ ವ್ಯಕ್ತಿತ್ವದ ಮೂಲಕ ಎಲ್ಲರ ಮನಸ್ಸು ಗೆದ್ದಿದ್ದವರು ವಿಧಿಯಾಟಕ್ಕೆ ಬಲಿಯಾದರು. ಸಂತೋಷ್ ಅವರ ಅಗಲಿಕೆಯು ವಿದ್ಯಾಸಂಸ್ಥೆಗೆ ಹಾಗೂ ಈ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ.ಅವರದ್ದು ಬೆಲೆ ಕಟ್ಟಲಾಗದ ವ್ಯಕ್ತಿತ್ವ. ಅವರ ಕುಟುಂಬದ ಜೊತೆ ಸಂಸ್ಥೆಯು ಸದಾ ಇರುತ್ತದೆ ಎಂಬ ಭರವಸೆ ನೀಡಿದೆ. *ಈ ನಿಟ್ಟಿನಲ್ಲಿ ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು,ಉಪನ್ಯಾಸಕರು ಮತ್ತು ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳ ಪೋಷಕರು ಒಗ್ಗೂಡಿ ಈ ದೊಡ್ಡ ಮೊತ್ತವನ್ನು ಸಂಗ್ರಹಿಸಿದ್ದಾರೆ. ಇದು ಶಿಕ್ಷಕರ ಮೇಲಿದ್ದ ಗೌರವ ಮತ್ತು ಮಾನವೀಯತೆಯ ಪ್ರತೀಕವಾಗಿದೆ.

ಸಂಸ್ಥೆಯ ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಪ್ರಾಂಶುಪಾಲ ರಂಜನ್ ಬಿ.ಶೆಟ್ಟಿ, ಮುಖ್ಯೋಪಾಧ್ಯಾಯ ಪ್ರದೀಪ್ ಕೆ. ಉಪಸ್ಥಿತರಿದ್ದರು.ರಜತ್ ಭಟ್ ನಿರೂಪಿಸಿದರು. ಹಾಗೇ ಕಾರ್ಯಕ್ರಮದಲ್ಲಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.