



ಡೈಲಿ ವಾರ್ತೆ: 30/ಅ./2025

ಅಭ್ಯಾಸದ ವೇಳೆ ಚೆಂಡು ಬಡಿದು ಆಸ್ಟ್ರೇಲಿಯಾದ ಯುವ ಕ್ರಿಕೆಟರ್ ಸಾವು|

ಅಭ್ಯಾಸದ ವೇಳೆ ಚೆಂಡು ತಲೆಗೆ ಬಡಿದು ಆಸ್ಟ್ರೇಲಿಯಾದ ಯುವ ಕ್ರಿಕೆಟರ್ ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ.
ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಐದು ಪಂದ್ಯಗಳ ಟಿ-20 ಸರಣಿಯನ್ನು ಆಡುತ್ತಿವೆ. ಕ್ಯಾನ್ಬರಾದಲ್ಲಿ ನಡೆದಿದ್ದ ಮೊದಲ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿತ್ತು. ಇದೀಗ ಎರಡನೇ ಪಂದ್ಯಕ್ಕಾಗಿ ತಂಡಗಳು ಸಿದ್ಧತೆ ನಡೆಸಿವೆ. ಇದರ ನಡುವೆಯೇ ಆಸ್ಟ್ರೇಲಿಯಾದ ಮೆಲ್ಬರ್ನ್ನಿಂದ ಕೆಟ್ಟ ಸುದ್ದಿಯೊಂದು ಹೊರಬಿದ್ದಿದೆ. ಅಭ್ಯಾಸದ ವೇಳೆ ಚೆಂಡು ತಲೆಗೆ ಬಡಿದು ಯುವ ಕ್ರಿಕೆಟರ್ ಸಾವನ್ನಪ್ಪಿದ್ದು, ಈ ಘಟನೆ ಕ್ರೀಡಾ ಜಗತನ್ನು ಬೆಚ್ಚಿಬೀಳಿಸಿದೆ.
ಹೌದು, 17 ವರ್ಷದ ಪ್ರತಿಭಾನ್ವಿತ ಕ್ರಿಕೆಟಿಗ ಬೆನ್ ಆಸ್ಟಿನ್ ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ವರದಿಗಳ ಪ್ರಕಾರ, ಬೆನ್ ಮಂಗಳವಾರ ತಮ್ಮ ಕ್ಲಬ್‌ನ ನೆಟ್ಸ್‌ನಲ್ಲಿ ಸ್ವಯಂಚಾಲಿತ ಬೌಲಿಂಗ್ ಯಂತ್ರದ ಸಹಾಯದಿಂದ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿದ್ದರು. ಅವರು ಹೆಲ್ಮೆಟ್ ಧರಿಸಿದ್ದರೂ ಸಹ ಚೆಂಡು ತಲೆ ಹಿಂದೆ ಕೆಳಭಾಗದಲ್ಲಿ ಬಲವಾಗಿ ಬಡಿದಿದ್ದು ಕುಸಿದು ಬಿದ್ದಿದ್ದಾರೆ. ನಂತರ ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ನಿಧನ ಹೊಂದಿದ್ದಾರೆ.
ಘಟನೆಗೆ ಫರ್ನ್‌ಟ್ರೀ ಗಲ್ಲಿ ಕ್ರಿಕೆಟ್ ಕ್ಲಬ್ ಸಂತಾಪ ಸೂಚಿಸಿದ್ದು, “ಬೆನ್ ಅವರ ನಿಧನದಿಂದ ನಾವು ಆಘಾತಕ್ಕೊಳಗಾಗಿದ್ದೇವೆ. ಅವರ ಸಾವು ಕ್ರಿಕೆಟ್ಗೆ ಭರಿಸಲಾಗದ ದೊಡ್ಡ ನಷ್ಟವಾಗಿದೆ. ಬೆನ್ ಒಬ್ಬ ಅತ್ಯುತ್ತಮ ಕ್ರಿಕೆಟಿಗ ಆಗಿದ್ದು ನಾಯಕತ್ವದಲ್ಲೂ ಉತ್ತಮ ದಾಖಲೆ ಹೊಂದಿದ್ದರು ಎಂದು ತಿಳಿಸಿದೆ. ಇವರು ತಂಡಕ್ಕೆ ಭರವಸೆಯ ಬೌಲರ್ ಮತ್ತು ಬ್ಯಾಟ್ಸ್‌ಮನ್ ಆಗಿದ್ದರು, ಅಲ್ಲದೇ ಭವಿಷ್ಯದ ಬಗ್ಗೆ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದರು. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಸಂತಾಪ ಸೂಚಿಸಿದೆ.
