



ಡೈಲಿ ವಾರ್ತೆ: 02/NOV/2025

ಹಸುವಿನ ಬಾಲ ಕತ್ತರಿಸಿ ವಿಕೃತಿ, ಕಿಡಿಗೇಡಿಗಳ ವಿರುದ್ಧ ವ್ಯಾಪಕ ಆಕ್ರೋಶ

ತುಮಕೂರು: ಮೂಕ ಜೀವಿಗಳ ಮೇಲಿನ ದುಷ್ಟ ಮಾನವನ ವಿಕೃತಿಗಳು ಮುಂದುವರೆದಿದ್ದು, ಈ ಹಿಂದೆ ಹಸುಗಳ ಕೆಚ್ಚಲು ಕೊಯ್ದಿದ್ದ ಘಟನೆ ಹಸಿರಾಗಿರುವಂತೆಯೇ ಇದೀಗ ಕಿಡಿಗೇಡಿಗಳು ಹಸುವಿನ ಬಾಲವನ್ನು ಕತ್ತರಿಸಿ ಹಾಕಿದ್ದಾರೆ.
ತುಮಕೂರಿನ ಅಶೋಕ ನಗರದಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದ್ದು, ಹಸುವಿನ ಬಾಲ ಕತ್ತರಿಸಿ ಕಿಡಿಗೇಡಿಗಳು ವಿಕೃತಿ ಮೆರೆದಿದ್ದಾರೆ. ಮಾರಕಾಸ್ತ್ರಗಳಿಂದ ಹಸುವಿನ ಬಾಲ ಕೊಯ್ದು ಬಾಲ ಕೊಂಡೊಯ್ದಿದ್ದಾರೆ ಎನ್ನಲಾಗಿದೆ.
ಮೂಲಗಳ ಪ್ರಕಾರ ಬೀಡಾಡಿ ಹಸುವೊಂದು ತುಮಕೂರು ನಗರ ಅಶೋಕ ನಗರ, ವಿದ್ಯಾನಗರ, ಎಸ್ಐಟಿ ಬಡಾವಣೆಗಳಲ್ಲಿ ಓಡಾಡಿಕೊಂಡಿತ್ತು. ಈ ಬಡಾವಣೆಯ ಅಂಗಡಿ ಮಾಲೀಕರು, ಮನೆಯವರು ಹಸುವಿಗೆ ಧಾನ್ಯವನ್ನು, ಹಣ್ಣುಗಳನ್ನು ಕೊಡುತಿದ್ದರು.
ಆದರೆ ಕೆಲ ದಿನಗಳ ಹಿಂದೆ ರಾತ್ರಿವೇಳೆ ಯಾರೋ ಕಿಡಿಗೇಡಿಗಳು ಹಸುವಿನ ಬಾಲವನ್ನು ಮಾರಕಾಸ್ತ್ರಗಳಿಂದ ಕತ್ತರಿಸಿದ್ದು, ಕೇವಲ ಹಸುವಿನ ಬಾಲ ಅಷ್ಟೇ ಅಲ್ಲ, ಪೃಷ್ಠ ಭಾಗಕ್ಕೂ ಗಾಯಗೊಳಿಸಿ ವಿಕೃತಿ ಮೆರೆದಿದ್ದಾರೆ.
ಇದನ್ನು ಕಂಡ ಸಾರ್ವಜನಿಕರು ಪಶು ವೈದ್ಯರನ್ನು ಕರೆ ತಂದು ಚಿಕಿತ್ಸೆ ಕೊಡಿಸಿದ್ದಾರೆ. ಈ ಸಂಬಂಧ ತುಮಕೂರು ನ್ಯೂಟೌನ್ ಪೊಲೀಸರಿಗೆ ದೂರು ನೀಡಲಾಗಿದ್ದು, ಪೊಲೀಸರ ತನಿಖೆಯಿಂದಷ್ಟೇ ಘಟನೆಯ ಅಸಲಿ ಸಂಗತಿ ಬಯಲಾಗಬೇಕಿದೆ.