



ಡೈಲಿ ವಾರ್ತೆ: 03/NOV/2025

ಮಲ್ಪೆಯಲ್ಲಿ ಬೋಟ್ ನ ನಕಲಿ ದಾಖಲೆ ಸೃಷ್ಟಿಸಿ ಅವ್ಯವಹಾರ!

ಉಡುಪಿ : ಮಲ್ಪೆಯಲ್ಲಿ ಬೋಟ್ ನ ನಕಲಿ ದಾಖಲೆ ತಯಾರಿಸುವ ದಂದೆ ರಾಜಾರೋಷವಾಗಿ ನಡೆಯುತ್ತಿದೆ. ಆದರೆ ಮೀನುಗಾರಿಕೆ ಇಲಾಖೆ ಮಾತ್ರ ಕಣ್ಣು ಮುಚ್ಚಿ ಕುಳಿತ್ತಿರುವುದು ಬೋಟ್ ಮಾಲಕರ ಆಕ್ರೋಶಕ್ಕೆ ಕಾರಣವಾಗಿದೆ.
ಕೆಲವೊಂದು ಬೋಟ್ ಇಲ್ಲದಿದ್ದರೂ ಕೂಡ, ಅದರ ಇಂಜಿನ್ ನಂಬರ್ ಗಳನ್ನು ಹೊಸ ಬೋಟ್ ಗೆ ಪಂಚ್ ಹಾಕಿ, ನಕಲಿ ದಾಖಲೆ ಸೃಷ್ಟಿಸುತ್ತಿದ್ದಾರೆ. ಆದರೆ ಮೀನುಗಾರಿಕೆ ಇಲಾಖೆ ಮಾತ್ರ ಸಂಭಂದವೇ ಇಲ್ಲದಂತೆ ಕುಳಿತಿದೆ. ಯಾವುದೇ ಬೋಟ್ ನ RC ನೀಡುವಾಗ ಮೀನುಗಾರಿಕೆ ಇಲಾಖೆಯಿಂದ ಪರಿಶೀಲನೆ ನಡೆಸಿ ನೀಡಬೇಕು. ಆದರೆ ಮೀನುಗಾರಿಕೆ ಇಲಾಖೆಯಲ್ಲಿ ಮಾತ್ರ ಎಲ್ಲಾ RCಗಳು ಕೂಡ ಚಾಲ್ತಿಯಲ್ಲಿ ಇರುತ್ತದೆ.
ಜಿಲ್ಲೆಯಲ್ಲಿ ಎಷ್ಟೋ ಬೋಟ್ಗಳು ಕಾಣೆಯಾಗಿರುತ್ತವೆ. ಆದರೆ ಹಳೆಯ ಬೋಟಿನ RCಗಳನ್ನ ಲಂಗರು ಹಾಕಿರುವಂತಹ ಹೊಸ ಬೋಟ್ ಗೆ ಪಂಚ್ ಮಾಡುತ್ತಿದ್ದಾರೆ. ಈ ವೇಳೆಯೂ ಕೂಡ ಮೀನುಗಾರಿಕೆ ಇಲಾಖೆ ನಮಗೂ ಇದಕ್ಕೂ ಯಾವುದೇ ಸಂಬಂಧವೇ ಇಲ್ಲ ಎನ್ನುವಂತೆ ಕಣ್ಣು ಮುಚ್ಚಿ ಕುಳಿತಿದೆ.
ಈ ಬಗ್ಗೆ ಇತ್ತೀಚಿಗೆ ಕೊಡವೂರು ಗ್ರಾಮದ ಜಯೇಶ್ ಕೋಟ್ಯಾನ್ ಮಲ್ಪೆ ಪೊಲೀಸ್ ಠಾಣೆಗೆ ದೂರು ನೀಡಿರುತ್ತಾರೆ.
ಜಯೇಶ್ ಕೋಟ್ಯಾನ್ ಎಂಬವರು ಬಾಲಾಜಿ ಹೆಸರಿನ ಬೋಟ್ ನ ನಿಜವಾದ ಮಾಲಕರಾಗಿರುತ್ತಾರೆ.
ಮಲ್ಪೆಯ ಜಯೇಶ್ ಕೋಟ್ಯಾನ್ ಮಾಲಕತ್ವದ ಬಾಲಾಜಿ ಎಂಬ ಹೆಸರಿನ ಪರ್ಸಿನ್ ಬೋಟ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಡ್ರೈವರ್ ಹಾಗೂ ರೈಟರ್ ವಂಚನೆ ಎಸಗಿದ್ದಾರೆ.
ಬಾಲಾಜಿ ಪರ್ಸಿನ್ ಬೋಟ್ ನಲ್ಲಿ ಡ್ರೈವರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರಕಾಶ್ ಕುಂದರ್, ರೈಟರ್ ಪ್ರಸಾದ್ ಪೂಜಾರಿ, ಹಾಗೂ ಪ್ರಕಾಶ್ ಗೆಳೆಯ ಶರೀಫ್ ಸಾಹೇಬ್ ಬಾಲಾಜಿ ಬೋಟ್ ನ ನಕಲಿ ದಾಖಲೆ ತಯಾರಿಸಿ ಬೋಟ್ ಮಾಲಕನ ವಂಚನೆಗೆ ಯತ್ನಿಸಿದ್ದಾರೆ.
ಪ್ರಕಾಶ್ ಕುಂದರ್ ಹಾಗೂ ಪ್ರಸಾದ್ ಪೂಜಾರಿ, ತಾವೇ ಕರ್ತವ್ಯ ನಿರ್ವಹಿಸುತ್ತಿದ್ದ ಬೋಟ್ ಮಾಲಕನಿಗೆ ವಂಚಿಸಿದ್ದು, ಬಂದರಿನಲ್ಲಿ ಲಂಗರು ಹಾಕಿದ್ದ ಬಾಲಾಜಿ ಬೋಟ್ ನ ಹೆಸರನ್ನು ಮತ್ಸ್ಯ ಹನುಮ – 2 ಎಂದು ಬದಲಿಸಿ, ಸಮುದ್ರದಲ್ಲಿಯೇ ಬೋಟ್ ನ ಪೈಂಟ್ ಬದಲಿಸಿ, ಬೋಟ್ ನ ನಕಲಿ ದಾಖಲೆ ತಯಾರಿಸಿದ್ದಾರೆ.
ಆದರೆ ಬೋಟಿನ ಸಾಮ್ಯತೆ ಎಷ್ಟು ಸಾಮರ್ಥ್ಯ ಎಷ್ಟು ಎನ್ನುವುದನ್ನು ಕೂಡ ಪರಿಗಣಿಸದೆ, ಮೀನುಗಾರಿಕೆ ಇಲಾಖೆಯ ಜೆಡಿ ಅವರು ಬೋಟನ್ನು ವಿಸ್ತರಣೆ ಮಾಡಲು ಅನುಮತಿಯನ್ನು ನೀಡಿರುತ್ತಾರೆ.
ಸರಕಾರ ಹಾಗೂ ಸಂಭಂದಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಬೇಕಾಗಿದೆ. ಮಲ್ಪೆಯಲ್ಲಿ ನಿಜವಾಗಿಯೂ ಇರುವ ಬೋಟ್ಗಳು ಎಷ್ಟು? ಸಹಾಯಧನ ಪಡೆಯುತ್ತಿರುವ ಬೋಟ್ಗಳು ಎಷ್ಟು? ಸರಕಾರದ ಲಕ್ಷಾಂತರ ರೂಪಾಯಿ ಸಬ್ಸಿಡಿಗಳು ಎಲ್ಲಿಗೆ ಹೋಗುತ್ತಿದೆ? ಎಷ್ಟು ಡೀಸೆಲ್ಗಳು ಹೋಗುತ್ತಿವೆ. ಕೇವಲ RC ಗೆ ಡೀಸೆಲ್ಗಳು ಹೋಗ್ತಾ ಇದೆಯಾ? ಡೀಸೆಲ್ಗಳು ಬೇರೆ ಮಾರಾಟ ಆಗುತ್ತಿದೆಯಾ? ಎನ್ನುವ ಬಗ್ಗೆ ಕೂಲಂಕುಶವಾಗಿ ಸರಕಾರ ಗಮನ ಹರಿಸಿದೆಯಾ? ಇಲಾಖೆಗಳು ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿದೆಯಾ? ಎಂಬ ಪ್ರಶ್ನೆಗಳು ಮಲ್ಪೆಯಲ್ಲಿ ಸಾರ್ವಜನಿಕರಿಂದ ಉದ್ಭವಿಸುತ್ತಿದೆ. ಇದಕ್ಕೆಲ್ಲ ಉತ್ತರ ಇನ್ನೂ ಸಿಗದೇ ಇರುವುದು ಜನರಲ್ಲಿ ಆತಂಕವನ್ನುಂಟು ಮಾಡಿದೆ.