



ಡೈಲಿ ವಾರ್ತೆ: 03/NOV/2025

ರೇಣುಕಾಸ್ವಾಮಿ ಹತ್ಯೆ ಪ್ರಕರಣ: 17 ಮಂದಿ ಆರೋಪಿಗಳ ದೋಷಾರೋಪ ನಿಗದಿ ಮುಕ್ತಾಯ: ನ.10ಕ್ಕೆ ವಿಚಾರಣೆ ಮುಂದೂಡಿಕೆ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ 17 ಮಂದಿ ಆರೋಪಿಗಳಿಗೆ ಇಂದು ದೋಷಾರೋಪ ನಿಗದಿ ಮುಕ್ತಾಯಗೊಂಡಿದ್ದು, ವಿಚಾರಣೆಯನ್ನ ನ.10ಕ್ಕೆ ಮುಂದೂಡಿ 64ನೇ ಸಿಸಿಎಚ್ ನ್ಯಾಯಾಲಯ ಆದೇಶಿಸಿದೆ.
ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಪವಿತ್ರಾಗೌಡ, ದರ್ಶನ್, ನಾಗರಾಜ್, ಲಕ್ಷ್ಮಣ್, ಜಗದೀಶ್ ಹಾಗೂ ಮಧ್ಯಂತರ ಜಾಮೀನಿನ ಮೇರೆಗೆ ಹೊರಗಿರುವ ಪ್ರದೋಷ್ ಸೇರಿದಂತೆ ಒಟ್ಟು 17 ಮಂದಿ ಆರೋಪಿಗಳು ನ್ಯಾಯಾಲಯದ ಮುಂದೆ ಹಾಜರಾದರು. ಈ ವೇಳೆ ನ್ಯಾಯಾಧೀಶರು ಆರೋಪಪಟ್ಟಿಯಲ್ಲಿರುವ ಅಂಶಗಳನ್ನ ಓದಿ ಹೇಳಿದರು. ಬಳಿಕ ಎಲ್ಲ ಆರೋಪಿಗಳು ತಮ್ಮ ಮೇಲಿನ ಆರೋಪಗಳನ್ನ ನಿರಾಕರಿಸಿದರು. ಹೀಗಾಗಿ ನ.10ರಂದು ಪ್ರಕರಣದ ಟ್ರಯಲ್ ದಿನಾಂಕವನ್ನ ನಿಗದಿಪಡಿಸುವುದಾಗಿ ಹೇಳಿ ಮುಂದೂಡಿದರು.
ದೋಷಾರೋಪ ನಿಗದಿ ಹಿನ್ನೆಲೆಯಲ್ಲಿ 64ನೇ ಸಿಸಿಎಚ್ ಕೋರ್ಟ್ ಒಳಗೆ ಜನಜಂಗುಳಿ ಇರುವುದನ್ನ ನೋಡಿದ ನ್ಯಾಯಾಧೀಶರು, ಪ್ರಕರಣಕ್ಕೆ ಸಂಬಂಧಪಟ್ಟ ವಕೀಲರನ್ನ ಹೊರತುಪಡಿಸಿ ಉಳಿದವರು ಹೊರಹೋಗುವಂತೆ ಸೂಚಿಸಿದರೂ ಕದಲದೇ ನಿಂತಿರುವುದನ್ನ ಕಂಡು ಅಸಮಾಧಾನ ವ್ಯಕ್ತಪಡಿಸಿದರು. ನಿಮಗೆ ಅವಕಾಶ ಕೊಡುತ್ತೇನೆ, ನೀವೇ ದೋಷಾರೋಪ ಹೊರಿಸಿ ಎಂದು ನ್ಯಾಯಾಧೀಶರು ಗದರಿಸಿದರು. ಆರೋಪಿಗಳು ಒಳಗೆ ಬರಲಾಗದಷ್ಟು ಜನರಿರುವುದನ್ನ ಕಂಡು ಕನಿಷ್ಠ 20 ಮಂದಿ ಹೊರ ಕಳಿಸುವಂತೆ ಸ್ಥಳದಲ್ಲಿದ್ದ ಎಸಿಪಿ ಶಿವಾನಂದ ಛಲವಾದಿಗೆ ಸೂಚಿಸಿದರು. ಅವರನ್ನ ತೆರವುಗೊಳಿಸಿದ ಬಳಿಕ ವಿಚಾರಣೆ ಆರಂಭಿಸಿದರು.
ಕೊಲೆ ಪ್ರಕರಣದ ಎ-1ನೇ ಆರೋಪಿ ಪವಿತ್ರಗೌಡಗೆ ರೇಣುಕಾಸ್ವಾಮಿಯಿಂದ ಬಂದ ಮೇಸೆಜ್ಗೆ ಸಂಬಂಧಿಸಿದಂತೆ ಆರೋಪಿಗಳೆಲ್ಲರೂ ಒಳಸಂಚು, ಸಾಕ್ಷ್ಯನಾಶ, ಮಾರಣಾಂತಿಕ ಕೊಲೆ ಹಾಗೂ ಅಕ್ರಮಕೂಟದಲ್ಲಿ ಭಾಗಿಯಾಗಿದ್ದೀರಾ ಎಂದು ಪ್ರಶ್ನಿಸಲಾಯಿತು.
ಅಲ್ಲದೇ ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನ ಅಪಹರಿಸಿ ಆರ್.ಆರ್.ನಗರದ ಪಟ್ಣಣಗೆರೆ ಶೆಡ್ವೊಂದಕ್ಕೆ ಕರೆತಂದು ಮರದ ದಿಮ್ಮಿನಿಂದ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಚಪ್ಪಲಿಯಿಂದ ಪವಿತ್ರಗೌಡ ಹೊಡೆದು ಹಲ್ಲೆ ಮಾಡಿದರೆ, ಪ್ರಕರಣದ ಎರಡನೇ ಆರೋಪಿ ದರ್ಶನ್, ರೇಣುಕಾಸ್ವಾಮಿಯ ಪ್ಯಾಂಟ್ ಬಿಚ್ಚಿ ಹಲ್ಲೆ ಮಾಡಲಾಗಿದೆ. ಕೆಲ ಅರೋಪಿಗಳಿಗೆ ಹಣದ ಆಸೆ ತೋರಿಸಿ ಸಂಚಿನಲ್ಲಿ ಭಾಗಿಯಾಗುವಂತೆ ಮಾಡಲಾಗಿದೆ. ಕೃತ್ಯದ ವೇಳೆ ಮೊಬೈಲ್ನಲ್ಲಿ ಸೆರೆಹಿಡಿದಿದ್ದ ಪೋಟೊವನ್ನ ಡಿಲೀಟ್ ಮಾಡಿ ಸಾಕ್ಷ್ಯ ನಾಶ ಮಾಡಲಾಗಿದೆ ಎಂದು ಓದಿ ಹೇಳಿದ ನ್ಯಾಯಾಧೀಶರು, ಹತ್ಯೆ ಪ್ರಕರಣದಲ್ಲಿ ನಿಮ್ಮ ಮೇಲಿನ ಆರೋಪಗಳ ಬಗ್ಗೆ ಏನು ಹೇಳುವಿರಿ ಎಂದು ಪ್ರಶ್ನಿಸಿದರು.
ನಮಗೂ ಮತ್ತು ಕೊಲೆಗೆ ಸಂಬಂಧವಿಲ್ಲ. ನಮ್ಮ ಮೇಲಿನ ಆರೋಪಗಳು ಸುಳ್ಳಾಗಿದೆ. ಹೀಗಾಗಿ ಪ್ರಕರಣದ ವಿಚಾರಣೆ ಎದುರಿಸಲು ಸಿದ್ದ ಎಂದು ಉತ್ತರಿಸಿದರು. ದೋಷಾರೋಪ ನಿಗದಿ ಪ್ರಕ್ರಿಯೆ ಪೂರ್ಣಗೊಳಿಸಿ ಟ್ರಯಲ್ ವಿಚಾರಣೆ ದಿನಾಂಕವನ್ನ ನ.10ಕ್ಕೆ ತಿಳಿಸುವುದಾಗಿ ಹೇಳಿ ನ್ಯಾಯಾಧೀಶರು ವಿಚಾರಣೆ ಮುಂದೂಡಿದರು.