



ಡೈಲಿ ವಾರ್ತೆ: 03/NOV/2025

ಮುಲ್ಕಿ: ಸಸಿಹಿತ್ಲು ಮುಂಡಾ ಬೀಚ್ ನಲ್ಲಿ ಸಮುದ್ರ ಪಾಲಾಗಿದ್ದ ವಿದ್ಯಾರ್ಥಿ ಪ್ರಣವ್ ಶವ ಪತ್ತೆ

ಮುಲ್ಕಿ: ಹಳೆಯಂಗಡಿ ಸಮೀಪದ ಸಸಿಹಿತ್ಲು ಮುಂಡಾ ಬೀಚ್ ಬಳಿ ಸಮುದ್ರಕ್ಕೆ ಈಜಲು ತೆರಳಿ ನಾಪತ್ತೆಯಾಗಿದ್ದ ಬೆಂಗಳೂರು ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿ ಪ್ರಣವ್ ಅವರ ಶವ ಸೋಮವಾರ ಬೆಳಿಗ್ಗೆ ಪತ್ತೆಯಾಗಿದೆ.

ಭಾನುವಾರ ಸಮುದ್ರದಲ್ಲಿ ಮುಳುಗಿದ್ದ ಪ್ರಣವ್ ಅವರ ದೇಹವು ಇಂದು ಬೆಳಿಗ್ಗೆ ಸಸಿಹಿತ್ಲು ಮುಂಡಾ ಬೀಚ್ ಸಮುದ್ರ ದಡದಲ್ಲಿ ದೊರೆತಿದೆ.
ಬೆಂಗಳೂರಿನ ವಿವಿಧ ಇಂಜಿನಿಯರಿಂಗ್ ಕಾಲೇಜುಗಳಿಂದ ಬಂದಿದ್ದ ಏಳು ಮಂದಿ ವಿದ್ಯಾರ್ಥಿಗಳು ಭಾನುವಾರ ಮಧ್ಯಾಹ್ನ 1.45 ಗಂಟೆಗೆ ಗೂಗಲ್ ಮೂಲಕ ಸಸಿಹಿತ್ಲು ಮುಂಡಾ ಬೀಚ್ ಅನ್ನು ಹುಡುಕಿ ಈಜಲು ಬಂದಿದ್ದರು. ಸಮುದ್ರಕ್ಕೆ ಇಳಿದಾಗ ಭಾರೀ ಗಾತ್ರದ ಅಲೆಗಳು ಅಪ್ಪಳಿಸಿದ್ದು, ಏಳು ಜನರ ಪೈಕಿ ಆರು ಮಂದಿ ವಿದ್ಯಾರ್ಥಿಗಳು ಅಲ್ಪಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದರು. ಆದರೆ, ವಿದ್ಯಾರ್ಥಿ ಪ್ರಣವ್ ಅಲೆಯ ಸೆಳೆತಕ್ಕೆ ಸಿಲುಕಿ ನೀರುಪಾಲಾಗಿದ್ದರು.
ಘಟನೆ ನಡೆದ ತಕ್ಷಣ ಪೊಲೀಸರು ಹಾಗೂ ನುರಿತ ಈಜುಗಾರರ ತಂಡ ಭಾನುವಾರ ತೀವ್ರ ಶೋಧ ಕಾರ್ಯಾಚರಣೆ ನಡೆಸಿತ್ತು. ಸೋಮವಾರ ಬೆಳಿಗ್ಗೆ ಪ್ರಣವ್ ಅವರ ಶವ ಸಮುದ್ರದಲ್ಲಿ ಪತ್ತೆಯಾಗಿದ್ದು, ಸ್ಥಳೀಯ ಪಂಚಾಯತ್ ಸದಸ್ಯರಾದ ಚಂದ್ರಕುಮಾರ್, ಅನಿಲ್ ಪೂಜಾರಿ, ಹರೀಶ್ ಮತ್ತಿತರರು ಶವವನ್ನು ದಡಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಸುರತ್ಕಲ್ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.