ಡೈಲಿ ವಾರ್ತೆ: 17/NOV/2025

ಬಂಟ್ವಾಳ| ಅಕ್ರಮ ಜಾನುವಾರು ವಧಾ ಕೇಂದ್ರಕ್ಕೆ ಪೊಲೀಸ್ ದಾಳಿ: ಜಾನುವಾರು, ಮಾಂಸ ಸಹಿತ ಓರ್ವನ ಬಂಧನ

ಬಂಟ್ವಾಳ : ಅಕ್ರಮ ಜಾನುವಾರು ವಧಾ ಕೇಂದ್ರಕ್ಕೆ ದಾಳಿ ನಡೆಸಿದ ಬಂಟ್ವಾಳ ಗ್ರಾಮಾಂತರ ಪೊಲೀಸರು ಜಾನುವಾರು, ಮಾಂಸ ಸಹಿತ ಓರ್ವನನ್ನು ಬಂಧಿಸಿದ ಘಟನೆ ಅರಳ ಗ್ರಾಮದಲ್ಲಿ ಭಾನುವಾರ ನಡೆದಿದೆ.

ಇಲ್ಲಿನ ನಿವಾಸಿ ಮೈಯದಿ (57) ಎಂಬವರು ಅವರ ಮನೆಯ ಆವರಣದಲ್ಲಿರುವ ಶೆಡ್ ಬಳಿ ಜಾನುವಾರುಗಳನ್ನು ಕಟ್ಟಿಕೊಂಡು ವಧೆ ಮಾಡಿ ಮಾಂಸ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಬಂಟ್ವಾಳ ಗ್ರಾಮಾಂತರ ಠಾಣಾಧಿಕಾರಿ ನೇತೃತ್ವದ ಪೊಲೀಸರು ಸ್ಥಳಕ್ಕೆ ದಾಳಿ ಮಾಡಿದಾಗ, ಮನೆಯ ಬಳಿಯ ಶೆಡ್ಡಿನಲ್ಲಿ ಮೂರು ಜನರು, ದನವನ್ನು ವಧೆ ಮಾಡಿ ಮಾಂಸ ಮಾಡುತ್ತಿದ್ದು, ದಾಳಿ ಸಮಯ ಇಬ್ಬರು ಪರಾರಿಯಾಗಿದ್ದಾರೆ.

ಆರೋಪಿಗಳ ಪೈಕಿ ಮೈಯದಿ ಎಂಬಾತನನ್ನು ವಶಕ್ಕೆ ಪಡೆದಿರುವ ಪೊಲೀಸರು ಶೆಡ್ಡಿನಲ್ಲಿದ್ದ ಮೂರು ಹಸುಗಳನ್ನು ಮತ್ತು ಒಂದು ಕರುವನ್ನು ರಕ್ಷಿಸಿದ್ದಾರೆ. ವಧೆ ಮಾಡಿದ ಸುಮಾರು 150 ಕೆಜಿ ದನದ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 172/2022 ಕಲಂ 4,5,7,12 ಕರ್ನಾಟಕ ಜಾನುವಾರು ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯಿದೆ-2020 ಕಲಂ 11(1)(ಡಿ) ಪ್ರಾಣಿ ಹಿಂಸೆ ನಿಷೇಧ ಕಾಯಿದೆ ಹಾಗೂ ಕಲಂ 303(2)307 ಬಿ ಎನ್ ಎಸ್ ಕಾಯಿದೆಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಆರೋಪಿಗಳು ಯಾವುದೇ ಪರವಾನಿಗೆ ಇಲ್ಲದೇ ಮನೆಯ ಆವರಣದ ಶೆಡ್ಡಿನಲ್ಲಿ ಕಸಾಯಿಖಾನೆ ನಿರ್ಮಾಣ ಮಾಡಿಕೊಂಡು ಮನೆಯಿಂದಲೇ ವಿದ್ಯುತ್ ಸಂಪರ್ಕ ಪಡೆದು ಜಾನುವಾರುಗಳ ವಧೆ ನಡೆಸಿರುವುದು ಕಂಡುಬಂದ ಹಿನ್ನೆಲೆಯಲ್ಲಿ, ಮನೆ ಹಾಗೂ ಶೆಡ್ಡಿನ ಆವರಣವನ್ನು ಪೊಲೀಸರು ಜಪ್ತಿ ಮಾಡಿ, ಮಂಗಳೂರು ಸಹಾಯಕ ಆಯುಕ್ತರು ಹಾಗೂ ಉಪವಿಭಾಗೀಯ ದಂಡಾಧಿಕಾರಿಗಳಿಗೆ ಮುಟ್ಟುಗೋಲು ಮಾಡುವ ಬಗ್ಗೆ ವರದಿ ಸಲ್ಲಿಸಿದ್ದಾರೆ.

ಬಂಧಿತ ಮೈಯದಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ತಲೆಮರೆಸಿಕೊಂಡ ಆರೋಪಿಗಳ ಪತ್ತೆ ಕಾರ್ಯ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.