

ಡೈಲಿ ವಾರ್ತೆ: ಫೆ./25/2026

ರತ್ನಗಿರಿಯಲ್ಲಿ ಲಾರಿ ಅಪಘಾತ: ಉಳ್ಳಾಲದ ಯುವ ಚಾಲಕ ಮಹಮ್ಮದ್ ರಿಜ್ವಾನ್ ದುರ್ಮರಣ

ಉಳ್ಳಾಲ, ಫೆ.25: ಮಹಾರಾಷ್ಟ್ರ ರಾಜ್ಯದ ರತ್ನಗಿರಿಯಲ್ಲಿ ಲಾರಿಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಉಳ್ಳಾಲ ತಾಲೂಕಿನ ಬೋಳಿಯಾರ್ ಗ್ರಾಮದ ಯುವಕನೋರ್ವ ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ಮಂಗಳವಾರ ನಡೆದಿದೆ.

ಬೋಳಿಯಾರ್ ನಿವಾಸಿ ಬಿ.ಎಚ್. ಕರೀಂ ಅವರ ಪುತ್ರ ಮಹಮ್ಮದ್ ರಿಜ್ವಾನ್ (28) ಮೃತ ದುರ್ದೈವಿ.
ಅವರು ಮೀನು ಸಾಗಾಟದ ಲಾರಿಯಲ್ಲಿ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಮಹಾರಾಷ್ಟ್ರಕ್ಕೆ ಪ್ರಯಾಣ ಬೆಳೆಸಿದ್ದರು. ರತ್ನಗಿರಿ ಸಮೀಪ ಮಂಗಳವಾರ ಸಂಭವಿಸಿದ ಲಾರಿಗಳ ನಡುವೆ ನಡೆದ ಭೀಕರ ಡಿಕ್ಕಿಯಲ್ಲಿ ರಿಜ್ವಾನ್ ಗಂಭೀರವಾಗಿ ಗಾಯಗೊಂಡು, ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮೃತ ರಿಜ್ವಾನ್ ಅವರು ತಂದೆ, ತಾಯಿ, ಪತ್ನಿ, ಎರಡು ವರ್ಷದ ಮಗು ಸೇರಿದಂತೆ ಮೂವರು ಸಹೋದರರು ಹಾಗೂ ಮೂವರು ಸಹೋದರಿಯರನ್ನು ಅಗಲಿದ್ದಾರೆ. ಯುವಕನ ಅಕಾಲಿಕ ನಿಧನದಿಂದ ಬೋಳಿಯಾರ್ ಗ್ರಾಮದಲ್ಲಿ ಶೋಕಮಡುಗೆಯ ವಾತಾವರಣ ನಿರ್ಮಾಣವಾಗಿದೆ.