

ಡೈಲಿ ವಾರ್ತೆ: ಫೆ./25/2026

ಮಡಿಕೇರಿ ಬೆಟ್ಟಗೇರಿಯಲ್ಲಿ ಭೀಕರ ಕಾರು ಅಪಘಾತ: 20 ಅಡಿ ಗದ್ದೆಗೆ ಉರುಳಿ ಬಿದ್ದ ಕಾರು – ತಾಯಿ,ಮಗ ಪ್ರಾಣಾಪಾಯದಿಂದ ಪಾರು

ಮಡಿಕೇರಿ, ಫೆ.25: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯ ಗದ್ದೆಗೆ ಉರುಳಿ ಬಿದ್ದ ಘಟನೆ ಕೊಡಗು ಜಿಲ್ಲೆಯ ಬೆಟ್ಟಗೇರಿ ಗ್ರಾಮದಲ್ಲಿ ನಡೆದಿದೆ.
ಅದೃಷ್ಟವಶಾತ್ ಕಾರಿನಲ್ಲಿದ್ದ ತಾಯಿ, ಮಗ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಪ್ಪಂಗಳ ನಿವಾಸಿ ಸಾಗರ್ ಅವರು ಮಡಿಕೇರಿ ಮಾರ್ಗದಿಂದ ತಮ್ಮ ಕಾರಿನಲ್ಲಿ ಬರುತ್ತಿದ್ದ ವೇಳೆ, ಬೆಟ್ಟಗೇರಿ, ಮಡಿಕೇರಿ ಮುಖ್ಯರಸ್ತೆಯ ಹಂಪ್ಸ್ ಸಮೀಪದ ತಿರುವಿನಲ್ಲಿ ವಾಹನದ ನಿಯಂತ್ರಣ ಕಳೆದುಕೊಂಡಿದ್ದಾರೆ. ಪರಿಣಾಮವಾಗಿ ಕಾರು ರಸ್ತೆ ಬದಿಯ ಸುಮಾರು 20 ಅಡಿ ಆಳದ ಗದ್ದೆಗೆ ಉರುಳಿ ಬಿದ್ದಿದ್ದು, ವಾಹನ ಸಂಪೂರ್ಣ ಜಂಗೊಂಡಿದೆ.
ಅಪಘಾತದ ವೇಳೆ ಕಾರಿನಲ್ಲಿದ್ದ ಚಾಲಕ ಸಾಗರ್ ಹಾಗೂ ಅವರ ತಾಯಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಗಂಭೀರ ಅಪಾಯದಿಂದ ಪಾರಾಗಿದ್ದಾರೆ. ಕಾರಿನೊಳಗೆ ಸಿಲುಕಿದ್ದ ತಾಯಿ ಮತ್ತು ಮಗನನ್ನು ಸ್ಥಳೀಯರು ತಕ್ಷಣ ರಕ್ಷಣೆ ಮಾಡಿ ಹೊರತೆಗೆದಿದ್ದಾರೆ.
ಘಟನೆ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.