ಡೈಲಿ ವಾರ್ತೆ: ಫೆ./24/2026

ಶಿವಮೊಗ್ಗದಲ್ಲಿ ವಿದ್ಯಾರ್ಥಿ ಹತ್ಯೆ: ಇಬ್ಬರು ವಶಕ್ಕೆ, ಕೋಮು ಉದ್ವಿಗ್ನತೆ ತಡೆಯಲು ಬಿಗಿ ಬಂದೋಬಸ್ತ್

ಶಿವಮೊಗ್ಗ, ಫೆಬ್ರವರಿ 24: ಶಿವಮೊಗ್ಗ ನಗರದ ಹೊರವಲಯದ ಸೂಳೆಬೈಲು ಸರಕಾರಿ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಹಿನ್ನೆಲೆ ವಿಶೇಷ ತರಗತಿ ನಡೆಸಲಾಗುತ್ತಿದ್ದ ಸಂದರ್ಭದಲ್ಲಿ ಸಂಭವಿಸಿದ ಹಲ್ಲೆ ಪ್ರಕರಣವು ವಿದ್ಯಾರ್ಥಿಯೊಬ್ಬನ ಪ್ರಾಣಕ್ಕೆ ಕಾರಣವಾಗಿದೆ.

ಸೂಳೆಬೈಲು ಬಡಾವಣೆಯ ಸಂಕೇತ್ ಎಂಬ ವಿದ್ಯಾರ್ಥಿ, ತರಗತಿ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದ ವೇಳೆ ತನ್ನ ಸ್ನೇಹಿತ ಗಿರೀಶ್ ಮೇಲೆ ಐವರು ಬಾಲಕರು ಏಕಾಏಕಿ ಹಲ್ಲೆ ನಡೆಸುತ್ತಿದ್ದನ್ನು ಗಮನಿಸಿ, ಅವನನ್ನು ರಕ್ಷಿಸಲು ಧಾವಿಸಿದ್ದಾನೆ. ಈ ವೇಳೆ ಆರೋಪಿಗಳು ಸಂಕೇತ್ ಮೇಲೆಯೂ ಹಲ್ಲೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡ ಸಂಕೇತ್ ಅಲ್ಲಿಯೇ ಕುಸಿದು ಬಿದ್ದಿದ್ದಾನೆ.
ಗಿರೀಶ್ ತಕ್ಷಣ ತನ್ನ ಮನೆಯವರಿಗೆ ಹಾಗೂ ಅಕ್ಕಪಕ್ಕದವರಿಗೆ ಮಾಹಿತಿ ನೀಡಿದ್ದಾನೆ. ಸ್ಥಳಕ್ಕಾಗಮಿಸಿದವರು ಸಂಕೇತ್ ಅನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದರೂ, ಮಾರ್ಗಮಧ್ಯೆಯೇ ಆತ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಘಟನೆ ತಿಳಿಯುತ್ತಿದ್ದಂತೆಯೇ ಮಗನನ್ನು ಕಳೆದುಕೊಂಡ ಪೋಷಕರು ಆಘಾತಕ್ಕೊಳಗಾಗಿದ್ದು, ಕುಟುಂಬಸ್ಥರ ಅಕ್ರಂದನ ಮನಕಲುಕುವಂತಿತ್ತು.

ಘಟನೆ ವಿವರ ಮತ್ತು ಪೊಲೀಸ್ ಕ್ರಮ:

ವಿಶೇಷ ತರಗತಿ ಮುಗಿದ ನಂತರ ಬಾಲಕರ ನಡುವೆ ಉಂಟಾದ ವಾಗ್ವಾದ ಹಲ್ಲೆಗೆ ತಿರುಗಿದಿದ್ದು, ಅನ್ಯಕೋಮಿನ ಬಾಲಕರಿಂದ ಗಿರೀಶ್ ಹಾಗೂ ನಂತರ ಸಂಕೇತ್ ಮೇಲೆ ದಾಳಿ ನಡೆದಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಮಾಹಿತಿ ದೊರಕುತ್ತಿದ್ದಂತೆಯೇ ತುಂಗಾ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಲ್ಲೆ ನಡೆಸಿ ಸಾವಿಗೆ ಕಾರಣವಾದ ಆರೋಪದಡಿ ಇಬ್ಬರು ಬಾಲಕರನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಲಾಗಿದೆ.

ಕೋಮು ಉದ್ವಿಗ್ನತೆ ತಡೆಯಲು ಕಟ್ಟೆಚ್ಚರ

ಘಟನೆಯ ಬಳಿಕ ಯಾವುದೇ ರೀತಿಯ ಕೋಮು ಗಲಭೆ ಸಂಭವಿಸದಂತೆ ಜಿಲ್ಲಾ ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಘಟನಾ ಸ್ಥಳ, ಮೆಗ್ಗಾನ್ ಜಿಲ್ಲಾಸ್ಪತ್ರೆ ಸೇರಿದಂತೆ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಪೊಲೀಸರು ಹೈ ಅಲರ್ಟ್ ಘೋಷಿಸಿದ್ದಾರೆ.
ಪರೀಕ್ಷೆ ತಯಾರಿಯಲ್ಲಿ ತೊಡಗಿದ್ದ ವಿದ್ಯಾರ್ಥಿಯೊಬ್ಬನ ದುರಂತ ಅಂತ್ಯ ನಗರವನ್ನು ಬೆಚ್ಚಿಬೀಳಿಸಿದ್ದು, ಪ್ರಕರಣದ ಸಮಗ್ರ ತನಿಖೆ ಮುಂದುವರಿದಿದೆ.