

ಡೈಲಿ ವಾರ್ತೆ: ಫೆ./24/2026

ಚನ್ನಗಿರಿ ದರೋಡೆ ಪ್ರಕರಣಕ್ಕೆ ತೆರೆ: ವೃದ್ಧ ದಂಪತಿಗೆ ಹಿಂಸೆ ನೀಡಿ 8.40 ಲಕ್ಷ ಚಿನ್ನ ದೋಚಿದ ತಮಿಳುನಾಡು ಗ್ಯಾಂಗ್ ಬಂಧನ, 14 ಲಕ್ಷ ಮೌಲ್ಯದ ವಸ್ತು ವಶ!

ದಾವಣಗೆರೆ, ಫೆ. 24: ಚನ್ನಗಿರಿ ತಾಲೂಕಿನ ಕಾಕನೂರ ಗ್ರಾಮದ ಒಂಟಿ ಮನೆಯಲ್ಲಿ ವಾಸಿಸುತ್ತಿದ್ದ ವೃದ್ಧ ದಂಪತಿಯನ್ನು ಕೈಕಾಲು ಕಟ್ಟಿ ಅಮಾನವೀಯವಾಗಿ ಹಿಂಸೆ ನೀಡಿ ಚಿನ್ನಾಭರಣ ದೋಚಿದ್ದ ಪ್ರಕರಣದಲ್ಲಿ ಪೊಲೀಸರ ಸೂಕ್ಷ್ಮ ಕಾರ್ಯಾಚರಣೆಗೆ ಕೊನೆಗೂ ಯಶಸ್ಸು ದೊರೆತಿದೆ.
ತಮಿಳುನಾಡು ಮೂಲದ ಐವರು ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧಿತರಿಂದ ಸುಮಾರು 14 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಗಳನ್ನು ತಮಿಳುನಾಡಿನ ಹೊಸೂರು ಬತ್ತಪಲ್ಲಿಯ ಶಿವಕುಮಾರ್, ಸೇಲಂ ಜಿಲ್ಲೆಯ ಕೇಶವನ್, ದಿಂಡಿಗಲ್ ಜಿಲ್ಲೆಯ ಅರುಣ್ ಪ್ರಶಾಂತ್, ತಿರುವಣ್ಣಾಮಲೈನ ಅರಸು ಹಾಗೂ ನಾಮಕ್ಕಲ್‌ನ ಕಲಾದೇವಿ ಎಂದು ಗುರುತಿಸಲಾಗಿದೆ.
ಪ್ರಕರಣದ ವಿವರ:
2025ರ ಸೆಪ್ಟೆಂಬರ್ 6ರಂದು ರಾತ್ರಿ ವೇಳೆ ದರೋಡೆ ನಡೆದಿದೆ. ಮನೆ ಬಾಗಿಲು ತೆರೆದಿರುವುದನ್ನು ಗಮನಿಸಿ ಒಳನುಗ್ಗಿದ ಐದು ಮಂದಿ ಮುಸುಕುಧಾರಿಗಳು, ಟಿವಿ ನೋಡುತ್ತಿದ್ದ ಮಾದಪ್ಪ ಅವರನ್ನು ಪಂಚೆಯಿಂದ ಕಟ್ಟಿ ಹಾಕಿ, ಅಡುಗೆ ಮನೆಯಲ್ಲಿ ಇದ್ದ ಸಾವಿತ್ರಮ್ಮ ಅವರ ಕೈಕಾಲುಗಳನ್ನು ಹಗ್ಗದಿಂದ ಬಿಗಿದು ಹಿಂಸೆ ನೀಡಿದರು. ಬಳಿಕ ಜೀವ ಬೆದರಿಕೆ ಹಾಕಿ, ಮೈಮೇಲಿದ್ದ ಬಂಗಾರ ಸೇರಿದಂತೆ ಕಪಾಟಿನಲ್ಲಿದ್ದ ಒಡವೆಗಳನ್ನು ದೋಚಿ ಪರಾರಿಯಾಗಿದ್ದರು. ದಂಪತಿಯ ಪುತ್ರ ಕೆಲಸದ ನಿಮಿತ್ತ ಹೊರಗಿದ್ದ ಸಂದರ್ಭದಲ್ಲೇ ಈ ಕೃತ್ಯ ನಡೆದಿತ್ತು. ಸರ್ಕಾರಿ ನೌಕರರಾಗಿದ್ದ ಈ ದಂಪತಿ ನಿವೃತ್ತಿ ಬಳಿಕ ಪುತ್ರನೊಂದಿಗೆ ತೋಟದ ಮನೆಯಲ್ಲಿ ನೆಲೆಸಿದ್ದರು. ಈ ಘಟನೆ ಪ್ರದೇಶದಲ್ಲಿ ಆತಂಕ ಮೂಡಿಸಿತ್ತು.
ತನಿಖೆಯಲ್ಲಿ ಬಹಿರಂಗವಾದ ಸತ್ಯ:
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿ, ತಮಿಳುನಾಡಿಗೆ ತೆರಳಿ ಖದೀಮರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರು ಇದೇ ರೀತಿಯ ಅನೇಕ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಬೆಂಗಳೂರಿನ ಕೆಲ ಪೊಲೀಸ್ ಠಾಣೆಗಳಲ್ಲಿಯೂ ಇವರ ವಿರುದ್ಧ ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ.
ಚಿತ್ರದುರ್ಗ ಮಾರ್ಗವಾಗಿ ಚನ್ನಗಿರಿ ಪ್ರವೇಶಿಸಿದ್ದ ಈ ಗ್ಯಾಂಗ್‌ಗೆ ಸ್ಥಳೀಯರಿಂದ ಸಹಕಾರ ಸಿಕ್ಕಿತ್ತೇ ಎಂಬ ಕೋನದಲ್ಲಿಯೂ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಪೊಲೀಸರ ಕಾರ್ಯಾಚರಣೆಯಿಂದ ವೃದ್ಧ ದಂಪತಿಗೆ ನ್ಯಾಯ ಸಿಕ್ಕಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.