ಡೈಲಿ ವಾರ್ತೆ: 21/NOV/2025

ವಿಧಾನಸೌಧ ಮುಂದೆ ನೇಪಾಳಿ ಗ್ಯಾಂಗ್ ಪುಂಡಾಟ – 11 ಮಂದಿ ಆರೋಪಿಗಳ ಬಂಧನ

ಬೆಂಗಳೂರು: ವಿಧಾನಸೌಧದ ಮುಂದೆ ಗುಂಪು ಗಲಾಟೆ ಪ್ರಕರಣ ಸಂಬಂಧ ಹನ್ನೊಂದು ನೇಪಾಳಿ ಆರೋಪಿಗಳ ಬಂಧನವಾಗಿದೆ.

ಕಳೆದ ಭಾನುವಾರ ನಗರದ ಜೆಪಿ ನಗರ, ಹೆಚ್‌ಎಸ್‌ಆರ್ ಲೇಔಟ್, ಕಬ್ಬನ್ ಪಾರ್ಕ್ ಸೇರಿದಂತೆ ಹಲವೆಡೆ ತಿರುಗಾಡಿದ್ದ ಗ್ಯಾಂಗ್ ಬಳಿಕ ವಿಧಾನಸೌಧದ ಮೆಟ್ರೋ ನಿಲ್ದಾಣ ಬಳಿ ಬಂದಿದ್ದರು. ಅವರವರಲ್ಲೇ ಗಲಾಟೆ ಉಂಟಾಗಿ ನೋಡ ನೋಡುತ್ತಿದ್ದಂತೆ ಮಾರಾಮಾರಿ ಮಾಡಿಕೊಂಡಿದ್ದರು. ಎಲ್ಲಿಂದಲೋ ಬಂದು ನೆಲದ ಕಾನೂನಿಗೆ ಬೆಲೆ ಕೊಡದೆ ಹೀಗೆ ಮಾರಾಮಾರಿ ಕಂಡ ಇತರ ಹೆಣ್ಣು ಮಕ್ಕಳು ಚೀರಾಡಿದರು. ಸ್ಥಳದಲ್ಲಿದ್ದ ಪೊಲೀಸರು ಲಾಠಿ ಬೀಸಿ ಮಾರಾಮಾರಿಯ ಗುಂಪನ್ನ ಚದುರಿಸಿದ್ದರು.

ಇನ್ನು ನೇಪಾಳಿ ಗ್ಯಾಂಗ್ ಗಲಾಟೆ ಹಿಂದೆ ಹಲವಾರು ವಿಚಾರಗಳು ಕಂಡುಬಂದಿವೆ. ಓರ್ವ ಯುವತಿ ವಿಚಾರವಾಗಿ ಗಲಾಟೆ ಮಾಡಿಕೊಂಡಿದ್ದಲ್ಲದೆ ಮೊಬೈಲ್ ಕಿತ್ತುಕೊಂಡಿದ್ದಾರೆ ಅನ್ನೋ ಕಾರಣಕ್ಕೆ ಎಲ್ಲರೂ ಸೇರಿ ಗುಂಪು ಗುಂಪಾಗಿ ಹೊಡೆದಾಡಿದ್ದಾರೆ.

ಘಟನೆ ಬಳಿಕ ಕೇಸ್ ದಾಖಲು ಮಾಡಿ 11 ಜನರ ಬಂಧನ ಮಾಡಲಾಗಿದ್ದು, ವಿಚಾರಣೆ ವೇಳೆ ವಿಧಾನಸೌಧ ಹಾಗೂ ಇತರ ಪ್ರಮುಖ ಏರಿಯಾಗಳಲ್ಲಿ ರೀಲ್ಸ್ ಮಾಡಿ ನೇಪಾಳಿ ಗುಂಪುಗಳಲ್ಲಿ ಶೇರ್ ಮಾಡುತ್ತಿದ್ದರು. ನೇಪಾಳದಲ್ಲಿ ಹೆಚ್ಚು ವೀವ್ಸ್ ಬರುತ್ತಿದ್ದ ಹಿನ್ನೆಲೆ ವೀಡಿಯೋ ವಿಚಾರವಾಗಿ ಗಲಾಟೆ ಮಾಡಿಕೊಂಡಿದ್ದಾಗಿ ಹೇಳಿದ್ದಾರೆ.