ಡೈಲಿ ವಾರ್ತೆ: 26/NOV/2025

ಪ್ರಧಾನಿ ಮೋದಿ ಆಗಮನ:
ನ.28ರಂದು ಉಡುಪಿ, ಮಣಿಪಾಲ, ಮಲ್ಪೆಯಲ್ಲಿ ಶಾಲಾ ಮಕ್ಕಳಿಗೆ ರಜೆ ಘೋಷಣೆ

ಉಡುಪಿ : ಉಡುಪಿ ಶ್ರೀಕೃಷ್ಣ ಮಠದಲ್ಲಿ ನಡೆಯುತ್ತಿರುವ ಲಕ್ಷಕಂಠ ಗೀತಾ ಪಾರಾಯಣದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ನವೆಂಬರ್ 28 ರಂದು ಆಗಮಿಸಲಿದ್ದು, ಈ ಹಿನ್ನೆಲೆಯಲ್ಲಿ ಭದ್ರತೆ ಸಲುವಾಗಿ ಶಿಷ್ಟಾಚಾರ ಪಾಲಿಸುವ ಉದ್ದೇಶದಿಂದ ಉಡುಪಿ ನಗರ, ಮಲ್ಪೆ ಮತ್ತು ಮಣಿಪಾಲ ಠಾಣೆ ವ್ಯಾಪ್ತಿಯ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಿಸಿ ಉಡುಪಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ನಿಯಮಾನುಸಾರ ಶಿಷ್ಟಾಚಾರ ಪಾಲಿಸಬೇಕಾಗುವುದರಿಂದ ಮತ್ತು ಪ್ರಧಾನ ಮಂತ್ರಿಯವರ ಭೇಟಿ ಸಂದರ್ಭದಲ್ಲಿ ಕೇಂದ್ರ ಸಚಿವರು, ಕರ್ನಾಟಕ ರಾಜ್ಯಪಾಲರು, ಮುಖ್ಯಮಂತ್ರಿಗಳು, ರಾಜ್ಯ ಸಚಿವರು ಹಾಗೂ ಮುಖ್ಯ ಕಾರ್ಯದರ್ಶಿಗಳು ಬರುವ ಸಾಧ್ಯತೆ ಇರುವುದರಿಂದ, ಭದ್ರತೆ ಹಾಗೂ ಸೂಕ್ತ ಶಿಷ್ಟಾಚಾರ ಪಾಲಿಸಬೇಕಾಗುತ್ತದೆ.

ಹೀಗಾಗಿ ನ.28 ರಂದು ಕಾರ್ಯಕ್ರಮ ಸುಗಮವಾಗಿ ಜರುಗಲು ಮತ್ತು ಶಿಸ್ತು, ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಉಡುಪಿ ಪೊಲೀಸ್‌ ಅಧೀಕ್ಷಕರ ಕೋರಿಕೆಯಂತೆ ಸಂಚಾರಕ್ಕೆ ತೊಡಕು ಉಂಟಾಗುವ ಸಾಧ್ಯತೆಗಳಿರುವುದರಿಂದ, ಶಾಲಾ ಮಕ್ಕಳ ಸುರಕ್ಷತೆ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಉಡುಪಿ ನಗರ ಠಾಣೆ, ಮಲ್ಪೆ ಠಾಣೆ ಮತ್ತು ಮಣಿಪಾಲ ಠಾಣೆ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ನ.28ರಂದು ಒಂದು ದಿನದ ರಜೆ ಘೋಷಿಸಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಆದೇಶಿಸಿದ್ದಾರೆ. ಈಗಾಗಲೇ ಪ್ರಧಾನಿ ಆಗಮಿಸುವ ಉಡುಪಿ ನಗರ ಭಾಗದ ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.