ಡೈಲಿ ವಾರ್ತೆ: 25/NOV/2025

ಉಡುಪ – ಹಂದೆ ಪ್ರಶಸ್ತಿಗೆ ಮೊಳಹಳ್ಳಿ ಕೃಷ್ಣ ಮೊಗವೀರ ಹಾಗೂ ಮುರಳಿ ಕಡೆಕಾರ್ ಆಯ್ಕೆ

ಕೋಟ: ವಿಶ್ವವಿಖ್ಯಾತ ಸಾಲಿಗ್ರಾಮ ಮಕ್ಕಳ ಮೇಳದ ಸಂಸ್ಥಾಪಕ ದ್ವಯರಾದ ದಿವಂಗತ ಕಾರ್ಕಡ ಶ್ರೀನಿವಾಸ ಉಡುಪ ಸಂಸ್ಮರಣ ಪ್ರಶಸ್ತಿಗೆ ಹಿರಿಯ ಯಕ್ಷಗಾನ ಸ್ತ್ರೀ ವೇಷಧಾರಿ ಮೊಳಹಳ್ಳಿ ಕೃಷ್ಣ ಮೊಗವೀರ ಹಾಗೂ ಎಚ್ ಶ್ರೀಧರ ಹಂದೆ ಗೌರವ ಪ್ರಶಸ್ತಿಗೆ ನಿವೃತ್ತ ಮುಖ್ಯೋಪಾಧ್ಯಾಯ, ಸಾಂಸ್ಕೃತಿಕ ಸಾಮಾಜಿಕ ಪರಿಚಾರಕ, ಹವ್ಯಾಸಿ ಯಕ್ಷಗಾನ ಕಲಾವಿದ ಉಡುಪಿಯ ಮುರಳಿ ಕಡೆಕಾರ್ ಭಾಜನರಾಗಿದ್ದಾರೆ.

ಹಿರಿಯ ಯಕ್ಷಗಾನ ಕಲಾವಿದ ದಿವಂಗತ ಮೊಳಹಳ್ಳಿ ಹಿರಿಯ ನಾಯಕ್ ಅವರಿಂದ ಪ್ರೇರಣೆಗೊಂಡು, ಗುರು ವೀರಭದ್ರ ನಾಯಕ್, ಹಳ್ಳಾಡಿ ಮಂಜಯ್ಯ ಶೆಟ್ಟಿ, ಕೋಟ ವೈಕುಂಠ ಮೊದಲಾದ ಕಲಾ ದಿಗ್ಗಜರ ಶಿಷ್ಯರಾಗಿ, ನಾರಣಪ್ಪ ಉಪ್ಪೂರರ ಗರಡಿಯಲ್ಲಿ ಪಳಗಿ, ಸತ್ಯವತಿ, ಚಿತ್ರಾಂಗದೆ, ದಮಯಂತಿ, ದ್ರೌಪದಿ, ಶಶಿಪ್ರಭೆ, ಮೀನಾಕ್ಷಿ, ಅಂಬೆ, ಸುಭದ್ರೆ, ಪಾರ್ವತಿ ಮೊದಲಾದ ಸ್ತ್ರೀ ಭೂಮಿಕೆಯಲ್ಲಿ ಸೈ ಎನಿಸಿ, ಮಂದರ್ತಿ, ಮಾರಣಕಟ್ಟೆ, ಅಮೃತೇಶ್ವರಿ, ಇಡುಗುಂಜಿ, ಸಾಲಿಗ್ರಾಮ ಮೇಳಗಳಲ್ಲಿ ಸುಮಾರು 50 ವರ್ಷಗಳ ಕಾಲ ಯಕ್ಷ ಸೇವೆಗೈದವರು ಮೊಳಹಳ್ಳಿ ಕೃಷ್ಣ ಮೊಗವೀರರು. ಹಿರಿಯ ಕಲಾವಿದರ ಸಾಂಗತ್ಯ ಹೊಂದಿ, ಅನುಭವಿ ಕಲಾವಿದರಾಗಿ ಬೆಹರಿನ್, ಇಂಗ್ಲೆಂಡ್, ಫ್ರಾನ್ಸ್ ಮೊದಲಾದ ವಿದೇಶದ ನೆಲದಲ್ಲೂ ಯಕ್ಷ ಕಂಪನ್ನು ಪಸರಿಸಿದವರು.

ನಿಟ್ಟೂರು ಪ್ರೌಢ ಶಾಲೆಯಲ್ಲಿ ಮುಖ್ಯೋಪಾಧ್ಯಾಯ ರಾಗಿ ನಿವೃತ್ತರಾದ ಮುರಳಿ ಕಡೆಕಾರ್ ತಮ್ಮ ಶಾಲೆಯನ್ನು ಮಾದರಿ ಶಾಲೆಯನ್ನಾಗಿಸುವಲ್ಲಿ ಪ್ರಮುಖರು. ಹವ್ಯಾಸಿ ಯಕ್ಷಗಾನ ಕಲಾವಿದರಾಗಿ, ಸಂಘಟಕರಾಗಿ ಅಂಬಲಪಾಡಿಯ ಲಕ್ಷ್ಮೀಜನಾರ್ದನ ಯಕ್ಷಗಾನ ಸಂಸ್ಥೆಯನ್ನು ಬಹುಕಾಲ ಮುನ್ನಡೆಡಿಸಿದವರು. ಉಡುಪಿಯ ಯಕ್ಷಗಾನ ಕಲಾರಂಗದ ಕಾರ್ಯದರ್ಶಿಯಾಗಿ ಕಲೆ, ಶಿಕ್ಷಣ, ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರು. ಕಲೆ, ಕಲಾವಿದರ ಏಳ್ಗೆಗಾಗಿ ದುಡಿದವರು.

ಜನವರಿ 18 ಭಾನುವಾರದಂದು ಕೋಟದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ನಡೆಸಲಾಗುವುದೆಂದು ಮಕ್ಕಳ ಮೇಳ ಟ್ರಸ್ಟ್ ಕಾರ್ಯಾಧ್ಯಕ್ಷ ಕೆ. ಮಹೇಶ್ ಉಡುಪ, ಅಧ್ಯಕ್ಷ ಬಲರಾಮ ಕಲ್ಕೂರ, ಉಪಾಧ್ಯಕ್ಷ ಜನಾರ್ದನ ಹಂದೆಯವರ ಸಮಿತಿ ನಿಶ್ಚಯಿಸಿದೆ ಎಂದು ಕಾರ್ಯದರ್ಶಿ ಎಚ್. ಸುಜಯೀಂದ್ರ ಹಂದೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.