
ಡೈಲಿ ವಾರ್ತೆ: 01/DEC/2025
ಉಡುಪಿ: ಯುವತಿ ಮೇಲೆ ಅತ್ಯಾಚಾರ : ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತ ಪ್ರದೀಪ್ ಪೂಜಾರಿ ಬಂಧನ

ಉಡುಪಿ: ಹಿಂದೂ ಸಂಘಟನೆಯ ಮುಖಂಡನೊರ್ವ ಮದುವೆಗೆ ನಿರಾಕರಿಸಿದ ಯುವತಿಯನ್ನು ಅತ್ಯಾಚಾರಗೈದು ಕೊಲೆ ಬೆದರಿಕೆ ಹಾಕಿದ ಘಟನೆ ಶನಿವಾರ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಯನ್ನು ಪೆರ್ಡೂರಿನ ಹಿಂದೂ ಸಂಘಟನೆಯೊಂದರ ನಾಯರ್‌ಕೋಡು ಘಟಕದ ಕಾರ್ಯಕರ್ತ ಪ್ರದೀಪ್ ಪೂಜಾರಿ(26) ಎಂದು ಗುರುತಿಸಲಾಗಿದೆ.
ಪ್ರದೀಪ್ ಪೂಜಾರಿ ನಿರ್ಜನ ಪ್ರದೇಶದಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯನ್ನು ಮದುವೆ ಆಗುವಂತೆ ಒತ್ತಾಯಿಸಿದ್ದ. ಇದಕ್ಕೆ ವಿರೋಧ ವ್ಯಕ್ತಪಡಿಸಿದಕ್ಕೆ ಆಕೆಯ ಕತ್ತು ಹಿಸುಕಿ ಬೆದರಿಸಿ ಅತ್ಯಾಚಾರ ಎಸಗಿದ್ದ ಎನ್ನಲಾಗಿದೆ. ಯುವತಿ ಮದುವೆಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ಆಕೆಯನ್ನು ಹಾಡಿಯಲ್ಲಿ ಹಿಂಬಲಿಸಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಬಳಿಕ ಅಲ್ಲಿಂದ ತಪ್ಪಿಸಿಕೊಂಡ ಆಕೆ ತನ್ನ ಮನೆಯವರಿಗೆ ಮಾಹಿತಿ ನೀಡಿದ್ದು, ಪೋಷಕರು ಯುವಕನ ವಿರುದ್ಧ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ.
ಅದರಂತೆ ಆರೋಪಿ ಪ್ರದೀಪ್ ಪೂಜಾರಿಯನ್ನು ಬಂಧಿಸಿದ ಉಡುಪಿ ಮಹಿಳಾ ಠಾಣಾ ಪೊಲೀಸರು, ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಆರೋಪಿ ಪ್ರದೀಪ್‌ನನ್ನು ಪೊಲೀಸರು ನ್ಯಾಯಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.