ಡೈಲಿ ವಾರ್ತೆ: 01/DEC/2025

ಸ್ವರ್ಣಲೇಪಿತ ಕನಕನ ಕಿಂಡಿ ಉದ್ಘಾಟನೆಗೆ ಮಾಜಿ ಸಚಿವರ ಕಡೆಗಣನೆ: ಬಿಜೆಪಿಯಿಂದ ಡ್ಯಾಮೇಜ್ ಕಂಟ್ರೋಲ್ ಗೆ ಯತ್ನ – ಪ್ರಮೋದ್ ಮಧ್ವರಾಜ್‌ – ಜಿಲ್ಲಾ ಬಿಜೆಪಿ ಜಂಟಿ ಸುದ್ದಿಗೋಷ್ಠಿ

ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರ ಉಡುಪಿ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಮತ್ತು ಕನಕನ ಕಿಂಡಿಗೆ ಸ್ವರ್ಣ ಕವಚ ದಾನ ಮಾಡಿರುವ ಪ್ರಮೋದ್‌ ಮಧ್ವರಾಜ್ ಅವರನ್ನು ಕಾರ್ಯಕ್ರಮದಲ್ಲಿ ಕಡೆಗಣಿಸಿದ್ದಕ್ಕೆ ವ್ಯಾಪಕ ವಿರೋಧಗಳು ಎದುರಾಗಿವೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿದ್ದು ಇಂದು ಪ್ರಮೋದ್‌ ಮದ್ವರಾಜ್ ಜೊತೆ ಜಂಟಿ ಸುದ್ದಿಗೋಷ್ಠಿ ನಡೆಸಿತು.

ಸುದ್ದಿಗೋಷ್ಠಿಯಲ್ಲಿ ಮೊದಲು ಮಾತನಾಡಿದ ಪ್ರಮೋದ್ ಮದ್ವ ರಾಜ್, ತಮ್ಮ ಹಿಂದಿನ ಹೇಳಿಕೆಯನ್ನೇ ಪುನರುಚ್ಚಾರ ಮಾಡಿದರು. ತಮಗೆ ಯಾವುದೇ ರೀತಿಯ ಬೇಸರವಾಗಿಲ್ಲ. ಮಠವಾಗಲಿ ಅಥವಾ ಜಿಲ್ಲಾ ಬಿಜೆಪಿ ಆಗಲಿ ನನಗೆ ಕಾರ್ಯಕ್ರಮದಲ್ಲಿ ಪ್ರವೇಶ ನಿರಾಕರಿಸಿದ್ದಕ್ಕೆ ಕಾರಣಕರ್ತರಲ್ಲ. ಯಾರ ಮೇಲೂ ನಾನು ಗೂಬೆ ಕೂರಿಸುವ ಪ್ರಯತ್ನ ಮಾಡುವುದಿಲ್ಲ. ಯಾರನ್ನೂ ಟೀಕೆ ಮಾಡುವುದಿಲ್ಲ. ನನ್ನ ಸೇವೆಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದು ಅತ್ಯಂತ ಖುಷಿ ಕೊಟ್ಟಿದೆ. ನನ್ನನ್ನು ಕಡೆಗಣಿಸಿದ್ದಕ್ಕೆ ಯಾರು ಕಾರಣ ಎಂಬುದೂ ನನಗೆ ಗೊತ್ತಿಲ್ಲ. ಆದರೆ ಮಠದವರು ಮತ್ತು ಜಿಲ್ಲಾ ಬಿಜೆಪಿ ಇದರ ಹಿಂದೆ ಇಲ್ಲ ಎಂದು ಪ್ರಮೋದ್ ಮಧ್ವರಾಜ್‌ ಸ್ಪಷ್ಟಪಡಿಸಿದ್ದಾರೆ.

ನಾನೊಬ್ಬ ಕನಕನ ಕಿಂಡಿಗೆ ಸ್ವರ್ಣ ಕವಚ ಸೇವೆ ನೀಡಿದವನಾಗಿ ಪ್ರಧಾನಿ ಉದ್ಘಾಟಿಸುವಾಗ ಅಲ್ಲೇ ನಿಂತು ವೀಕ್ಷಿಸುವ ಇಚ್ಛೆಯನ್ನು ಹೊಂದಿದ್ದೆ. ಆದರೆ ಅದು ಸಾಧ್ಯವಾಗಲಿಲ್ಲ. ಇದಕ್ಕೆ ನಾನು ಯಾರನ್ನೂ ದೂರವುದಿಲ್ಲ . ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಪರ ಅಭಿಪ್ರಾಯ ವ್ಯಕ್ತಪಡಿಸಿದವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಪ್ರಮೋದ್ ಮದ್ವರಾಜ್‌ ತಿಳಿಸಿದರು.

ಇದೇ ವೇಳೆ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಮಠದವರು ಮತ್ತು ನಾವು ಕಳಿಸಿದ ಪಟ್ಟಿಯಲ್ಲಿ ಪ್ರಮೋದ್ ಮಧ್ವರಾಜ್ ಅವರ ಹೆಸರು ಇತ್ತು. ಆದರೆ ಪ್ರಧಾನಿ ಕಛೇರಿಯಿಂದ ಪಟ್ಟಿಯನ್ನು ಪರಿಷ್ಕೃತಗೊಳಿಸಿ ಕಳಿಸುವಾಗ ಪ್ರಮೋದ್ ಮಧ್ವರಾಜ್ ಅವರ ಹೆಸರು ಇರಲಿಲ್ಲ. ಜೊತೆಗೆ ಹಲವರ ಹೆಸರು ಇರಲಿಲ್ಲ. ಇದಕ್ಕೆ ಜಿಲ್ಲಾ ಬಿಜೆಪಿ ಯಾವುದೇ ರೀತಿಯಲ್ಲೂ ಕಾರಣ ಅಲ್ಲ. ಅದನ್ನು ಪ್ರಮೋದ್ ಮಧ್ವರಾಜ್ ಅವರೇ ಸ್ಪಷ್ಟಪಡಿಸಿದ್ದಾರೆ.

ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ.ಹಾಲು ಸಕ್ಕರೆ ಬೆರೆತಂತೆ ಬಿಜೆಪಿ ಮತ್ತು ಪ್ರಮೋದ್‌ ಮದ್ವರಾಜ್ ಬೆರೆತಿದ್ದೇವೆ. ಒಟ್ಟಾರೆ ರೋಡ್ ಶೋ ಮತ್ತು ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ ಎಂದು ಹೇಳುವ ಮೂಲಕ ಡ್ಯಾಮೇಜ್ ಕಂಟ್ರೋಲ್‌ ಗೆ ಮುಂದಾಗಿದ್ದಾರೆ.