ಡೈಲಿ ವಾರ್ತೆ: 09/DEC/2025

ಕೋಟ ಸಹಕಾರಿ ವ್ಯವಸಾಯಿಕ ಸಂಘದ ಪಡುಕರೆ ಶಾಖೆಯ “ಸಹಕಾರ ಸಾಗರ” ನೂತನ ಕಟ್ಟಡಕ್ಕೆ ಶಿಲಾನ್ಯಾಸ

ಕೋಟ: ಕೋಟ ಸಹಕಾರಿ ವ್ಯವಸಾಯಕ ಸಂಘದ ಕೋಟತಟ್ಟು ಪಡುಕರೆ ಶಾಖೆಯ “ಸಹಕಾರ ಸಾಗರ” ನೂತನ ಕಟ್ಟಡಕ್ಕೆ ಡಿ. 8 ರಂದು ಸೋಮವಾರ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಲಿ. ಮಂಗಳೂರು ಇದರ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರಿಂದ ಶಿಲಾನ್ಯಾಸ ನಡೆಯಿತು.

ಈ ಸಂದರ್ಭದಲ್ಲಿ ಅವರು ಮಾತನಾಡಿ ಹಿಂದೆ ಸರಕಾರದಿಂದ ಸಹಕಾರಿ ಸಂಘಗಳಿಗೆ ದೇಣಿಗೆ ಸಿಗುತ್ತಿತ್ತು. ಆದರೆ ಇಂದು ಸರಕಾರ ಸಹಕಾರಿ ಸಂಘಗಳಿಂದಲೇ ಏನಾದರೂ ತೆಗೆದುಕೊಳ್ಳಲು ಸಾಧ್ಯವೇ? ಎಂಬುದನ್ನು ಪರಿಶೀಲಿಸುತ್ತಿದೆ. ಸರಕಾರದಿಂದ ಸಹಕಾರಿ ಸಂಘಗಳಿಗೆ ಕೋಟಿಗಟ್ಟಲೆ ಹಣ ಬರಲಿಕ್ಕಿದೆ. ರೈತರಿಗೆ ಬರಬೇಕಾದ ನಿಬಡ್ಡಿ ಸಾಲ, 5% ಸಾಲ 2, 3 ವರ್ಷಗಳಿಂದ ಬಾಕಿ ಇದೆ. ಕೇಂದ್ರ ಹಾಗೂ ರಾಜ್ಯ ಸಹಕಾರಿ ಸಚಿವರು ಗ್ರಾಮಕ್ಕೊಂದು ಸಹಕಾರಿ ಸಂಘ ಬೇಕು ಎಂದು ಹೇಳುತ್ತಿದ್ದಾರೆ. ನಮ್ಮ ಅವಿಭವಿತ ದ.ಕ.ಜಿಲ್ಲೆಯಲ್ಲಿ ಕೋಟ ಸಹಕಾರಿ ಸಂಘ ಮಾತ್ರ 11 ಗ್ರಾಮಕ್ಕೆ 13 ಶಾಖೆಗಳನ್ನು ನೀಡಿದ್ದು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲೇ ಈ ಸಹಕಾರಿ ಸಂಘ ಗುರುತಿಸಿಕೊಂಡಿದೆ ಎಂದು ರಾಜೇಂದ್ರ ಕುಮಾರ್ ನುಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಸಹಕಾರಿ ಸಂಘದ ಡಾ.ಕೃಷ್ಣ ಕಾಂಚನ್ ವಹಿಸಿದ್ದು ಅವರು ಮಾತನಾಡಿ ನಮ್ಮ ಸಹಕಾರಿ ಸಂಘದಲ್ಲಿ 6 ಕೋಟಿಗೂ ಮಿಕ್ಕಿದ ಕಟ್ಟಡ ನಿಧಿ ಇದೆ. 2.16 ಕೋಟಿ ವೆಚ್ಚದಲ್ಲಿ ಪಡುಕೆರೆ ಶಾಖಾ ಕಟ್ಟಡ ನಿರ್ಮಾಣಗೊಳ್ಳಲಿದ್ದು ಮುಂದೆ ಬನ್ನಾಡಿ ಶಾಖೆಗೂ ಶಿಲನ್ಯಾಸ ನಡೆಸಲಿದ್ದೇವೆ ಎಂದರು.

ಉದ್ಯಮಿ ಆನಂದ ಸಿ.ಕುಂದರ್ ಮಾತನಾಡಿ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಸಂಘದಂತೆ ಈ ಭಾಗದಲ್ಲಿ ಕೋಟ ಸಹಕಾರಿ ಸಂಘ ಬೆಳೆದು ನಿಂತಿದೆ ಎಂದರು. ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿ.ಬೆಂಗಳೂರು ಇದರ ನಿರ್ದೇಶಕ ಐಕಳಬಾವ ದೇವಿಪ್ರಸಾದ್ ಶೆಟ್ಟಿ, ಉದ್ಯಮಿ ದಿನೇಶ್ ಹೆಗ್ಡೆ, ದ.ಕ.ಜಿ.ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಅಶೋಕ ಕುಮಾರ್ ಶೆಟ್ಟಿ, ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಶ್ರೀಮತಿ ಲಾವಣ್ಯ, ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಜೆ.ಸುಧೀರ್ ಕುಮಾರ್, ಕೋಟತಟ್ಟು ಶ್ರೀ ಸದ್ಯೋಜಾತ ದೇವಸ್ಥಾನದ ಮೊಕ್ತೇಸರರಾದ ಶಿವಾನಂದ ಐತಾಳ, ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ವೇದಿಕೆಯಲ್ಲಿ ಉದ್ಯಮಿ ಮಲ್ಯಾಡಿ ಶಿವರಾಮ ಶೆಟ್ಟಿ, ಬ್ರಹ್ಮಾವರ ಸಿ.ಎ.ಬ್ಯಾಂಕ್ ಅಧ್ಯಕ್ಷ ಬಿರ್ತಿ ರಾಜೇಶ್ ಶೆಟ್ಟಿ, ಸಾಸ್ತಾನ ಸಿ.ಎ.ಬ್ಯಾಂಕ್ ಅಧ್ಯಕ್ಷ ಸುರೇಶ್ ಅಡಿಗ, ಸಂಘದ ಉಪಾಧ್ಯಕ್ಷ ಎಚ್. ನಾಗರಾಜ ಹಂದೆ, ಸಂಘದ ನಿರ್ದೇಶಕರಾದ ಟಿ.ಮಂಜುನಾಥ, ಕೆ.ಉದಯ ಕುಮಾರ್ ಶೆಟ್ಟಿ, ರವೀಂದ್ರ ಕಾಮತ್, ಮಹೇಶ್ ಶೆಟ್ಟಿ ಎಮ್, ಶ್ರೀಮತಿ ರಶ್ಮಿತಾ, ರಂಜಿತ್ ಕುಮಾರ್, ಚಂದ್ರ ಪೂಜಾರಿ, ಶ್ರೀಮತಿ ವಸಂತಿ ಪೂಜಾರಿ, ಜಿ.ಅಜಿತ್ ದೇವಾಡಿಗ, ಶ್ರೀಮತಿ ಪ್ರೇಮಾ, ದಿನಕರ ಶೆಟ್ಟಿ, ಶೇಖರ ಮರಕಾಲ, ಡಿಸಿಸಿಬ್ಯಾಂಕ್ ಪ್ರತಿನಿಧಿ ರಾಜಾರಾಮ ಶೆಟ್ಟಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ದ.ಕ. ಹಾಲು ಉತ್ಪಾದಕರ ಒಕ್ಕೂಟ ಇದರ ನಿರ್ದೇಕರಾದ ಶಿವಮೂರ್ತಿ ಐತಾಳ, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಕೊರಗ ಪೂಜಾರಿ, ಕರ್ನಾಟಕ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದರಾದ ಭಾಗವತ ಕೆ.ಪಿ.ಹೆಗ್ಡೆ, ಸುರೇಶ್ ಬಂಗೇರ ಕೋಟ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸತೀಶ್, ರಾಘವೇಂದ್ರ ಕರ್ಕೇರ, ರಮೇಶ್ ತಿಂಗಳಾಯ, ಗುಂಡು ಪೂಜಾರಿ, ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಶಿಕ್ಷಕರಾದ ಶೇಖರ್ ಕುಮಾರ್, ವಿಘ್ನೇಶ್ ದೇವಾಡಿಗ, ಸದಾನಂದ ಕುಂದರ್ ಅವರನ್ನು ಸನ್ಮಾನಿಸಲಾಯಿತು.

ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶರತ್ ಕುಮಾರ್ ಶೆಟ್ಟಿ ವರದಿ ವಾಚಿಸಿ ಕೊನೆಯಲ್ಲಿ ವಂದಿಸಿದರು. ಕೋಟ ಸಿ.ಎ. ಬ್ಯಾಂಕ್ ನಿರ್ದೇಶಕ, ಶಾಖಾ ಸಭಾಪತಿ ಜಿ.ತಿಮ್ಮ ಪೂಜಾರಿ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದ್ದು ಶಿಕ್ಷಕ ಸತೀಶ್ಚಂದ್ರ ಶೆಟ್ಟಿ ನಿರೂಪಿಸಿದರು.