ಡೈಲಿ ವಾರ್ತೆ: 15//DEC/2025

ಕೋಟತಟ್ಟು| ಸ್ನೇಹಿತರ ನಡುವೆ ಜಗಳ – ಕೊಲೆಯಲ್ಲಿ ಅಂತ್ಯ: ನಾಲ್ವರು ಆರೋಪಿಗಳ ಬಂಧನ

ಉಡುಪಿ: ಉಡುಪಿ ಜಿಲ್ಲೆಯ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟತಟ್ಟು ಪಡುಕರೆಯಲ್ಲಿ ನಡೆದ ಗಂಭೀರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆ ವಿವರ:
ಡಿ.14 ರಂದು ರಾತ್ರಿ ಸಂತೋಷ್ ಸೇರಿದಂತೆ ಆರು ಮಂದಿ ಬಾರ್‌ನಲ್ಲಿ ಪಾರ್ಟಿ ಮುಗಿಸಿ ಪಡುಕೆರೆಯ ಐದು ಸೆಂಟ್ಸ್ ಸೆಲ್ಯೂನ್ ಶಾಪ್ ಬಳಿ ಊಟ ಮಾಡಿಕೊಂಡು ಮಾತನಾಡುತ್ತಿದ್ದರು. ಈ ವೇಳೆ ಶಬರಿಮಲೆ ಹೋಗಿದ್ದ ವಿಚಾರ ಹಾಗೂ ಸಂತೋಷನ ಕುಟುಂಬದ ವಿಚಾರವಾಗಿ ತಗಾದೆ ತೆಗೆದು ದರ್ಶನ್, ಕೌಶಿಕ್, ಅಂಕಿತ ಮತ್ತು ಸುಜನ್ ನಡುವೆ ಜಗಳ ಉಂಟಾಗಿದೆ.

ಜಗಳ ತೀವ್ರಗೊಂಡು ನಾಲ್ವರು ಸೇರಿ ಸಂತೋಷ್ ಮೇಲೆ ಹಲ್ಲೆ ನಡೆಸಿದ್ದಾರೆ. ದರ್ಶನ್ ಸಂತೋಷನ ಕುತ್ತಿಗೆಯ ಹಿಂಬದಿ ಬಲವಾಗಿ ಹೊಡೆದಿದ್ದು, ಕೌಶಿಕ್ ಕೈಯಿಂದ ಹಲ್ಲೆ ಮಾಡಿದ್ದಾನೆ. ಜಗಳ ಬಿಡಿಸಲು ರಜತ್ ಮಧ್ಯ ಪ್ರವೇಶಿಸಿದ್ದರೂ, ಅದರೆ ಹಲ್ಲೆಯಿಂದ ಸಂತೋಷ್ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಬಾಯಿಯಿಂದ ನೊರೆ ಬರುತ್ತಿದ್ದು ಮಾತನಾಡಲು ಸಾಧ್ಯವಾಗಿರಲಿಲ್ಲ.

ತಕ್ಷಣ ಸಂತೋಷನನ್ನು ಕಾರಿನಲ್ಲಿ ಬ್ರಹ್ಮಾವರದ ಮಹೇಶ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ವೈದ್ಯರು ಈಗಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಈ ಕುರಿತು ನೀಡಲಾದ ದೂರಿನ ಮೇರೆಗೆ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 218/2025ರಂತೆ BNS ಕಲಂ 103, 115(2), 352 ಜೊತೆಗೆ 3(5) ಅಡಿ ಪ್ರಕರಣ ದಾಖಲಾಗಿದೆ.

ಈ ಪ್ರಕರಣದ ಆರೋಪಿಗಳಾದ ದರ್ಶನ್ (21), ಕೌಶಿಕ್ ಜೋಗಿ (21), ಅಂಕಿತ (19) ಮತ್ತು ಸುಜನ್ (21)ರನ್ನು ದಸ್ತಗಿರಿ ಮಾಡಲಾಗಿದ್ದು, ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದೆಂದು ಉಡುಪಿ ಜಿಲ್ಲಾ ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.