
ಡೈಲಿ ವಾರ್ತೆ: 22/DEC/2025
ಶಿವಮೊಗ್ಗ| ಕಿಡಿಗೇಡಿಗಳಿಂದ ಯುವಕನಿಗೆ ಚಾಕು ಇರಿತ

ಶಿವಮೊಗ್ಗ: ಅಮೀರ್ ಅಹ್ಮದ್ ಸರ್ಕಲ್ ಸಮೀಪದ ಮೊಬೈಲ್ ಅಂಗಡಿ ಬಳಿ ಯುವಕನೋರ್ವನಿಗೆ ಕಿಡಿಗೇಡಿಗಳು ಚಾಕುವಿನಿಂದ ಇರಿದ ಘಟನೆ ವರದಿಯಾಗಿದೆ.
ಗಾಯಗೊಂಡ ಯುವಕನನ್ನು ಸಯ್ಯದ್ ಬರ್ಕತ್ (32) ಎಂದು ಗುರುತಿಸಲಾಗಿದೆ.
ಅವರು ಶಿವಮೊಗ್ಗದ ಅಮೀರ್ ಅಹ್ಮದ್ ಸರ್ಕಲ್ ಪ್ರದೇಶದಲ್ಲಿ ಮೊಬೈಲ್ ಅಂಗಡಿ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಮೊಬೈಲ್ ಅಂಗಡಿ ಬಳಿಯೇ ಬಂದು ಕಿಡಿಗೇಡಿಗಳು ಸಯ್ಯದ್ ಬರ್ಕತ್ ಮೇಲೆ ದಾಳಿ ನಡೆಸಿ, ಕೈ ಹಾಗೂ ಹೊಟ್ಟೆಯ ಭಾಗಕ್ಕೆ ಚಾಕು ಇರಿದು ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.
ತೀವ್ರ ಗಾಯಗೊಂಡ ಸಯ್ಯದ್ ಬರ್ಕತ್ ಅವರನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ. ಹಳೆಯ ದ್ವೇಷದ ಹಿನ್ನೆಲೆ ಈ ಚಾಕು ಇರಿತ ನಡೆದಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ.