
ಡೈಲಿ ವಾರ್ತೆ:JAN/02/2026
ಚಾಲಕನ ನಿಯಂತ್ರಣ ತಪ್ಪಿ ಟೋಲ್ ಬೂತ್‌ಗೆ ಗುದ್ದಿದ ಬಸ್: ರಕ್ಷಣೆ ನೆಪದಲ್ಲಿ ಬಂದು ಪ್ರಯಾಣಿಕರ ಮೊಬೈಲ್ ಹೊತ್ತೊಯ್ದ ಕಳ್ಳರು

ದೇವನಹಳ್ಳಿ, ಜ.02: ಬೆಂಗಳೂರು–ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 44 ರಲ್ಲಿನ ದೇವನಹಳ್ಳಿ ಹೊರವಲಯದ ಟೋಲ್ ಪ್ಲಾಜಾ ಬಳಿ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಭಾರೀ ಅಪಘಾತ ತಪ್ಪಿದೆ.
ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಟ್ರಾನ್ಸ್ ಇಂಡಿಯಾ ಸಂಸ್ಥೆಯ ಸ್ಲೀಪರ್ ಕೋಚ್ ಬಸ್ ಅತಿವೇಗದಿಂದ ಬಂದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಟೋಲ್ ಪ್ಲಾಜಾ ಬೂತ್‌ಗೆ ಡಿಕ್ಕಿ ಹೊಡೆದಿದೆ. ಇದೇ ಸಮಯದಲ್ಲಿ ರಕ್ಷಣೆಯ ನೆಪದಲ್ಲಿ ಬಂದ ಕಳ್ಳರು ಪ್ರಯಾಣಿಕರ ಫೋನ್ಗಳನ್ನಯ ಹೊತ್ತೊಯ್ದಿರುವುದು ಅಮಾನವೀಯತೆಯ ಪರಮಾವಧಿಯಾಗಿದೆ.
ಮೂವರ ಐ ಫೋನ್ ಕದ್ದೊಯ್ದ ಕದೀಮರು
ಡಿಕ್ಕಿಯ ರಭಸಕ್ಕೆ ಬಸ್‌ನ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿದ್ದು, ಹಳೆ ಟೋಲ್ ಪ್ಲಾಜಾ ಬೂತ್ ಸಂಪೂರ್ಣವಾಗಿ ಧ್ವಂಸವಾಗಿದೆ. ಅಪಘಾತದ ವೇಳೆ ಟೋಲ್ ಪ್ಲಾಜಾ ಬಂದ್ ಆಗಿದ್ದರಿಂದ ಭಾರಿ ಅನಾಹುತ ತಪ್ಪಿದೆ ಎನ್ನಲಾಗಿದೆ. ಬೂತ್ ಬಳಿ ಯಾವುದೇ ವಾಹನಗಳು ಅಥವಾ ಜನರು ಇಲ್ಲದಿದ್ದ ಕಾರಣ ಹೆಚ್ಚಿನ ಅಪಾಯ ಸಂಭವಿಸಿಲ್ಲ. ಇದೇ ವೇಳೆ ಗಾಯಾಳುಗಳ ರಕ್ಷಣೆಗೆಂದು ಬಂದವರು ಬಸ್ಸಿನಲ್ಲಿದ್ದ ಮೂರು ಜನರ ಐ ಪೋನ್ ಕದ್ದು ಪರಾರಿಯಾದ ಅಮಾನವೀಯ ಘಟನೆ ನಡೆದಿದೆ.
ಅಪಘಾತದಲ್ಲಿ ಬಸ್ ಚಾಲಕ ಹಾಗೂ ಸಹ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಬಸ್ ಒಳಗಡೆ ಸಿಲುಕಿದ್ದ ಇಬ್ಬರನ್ನೂ ಹೊರತೆಗೆದು ತಕ್ಷಣವೇ ಆಸ್ಪತ್ರೆಗೆ ರವಾನಿಸಿದ್ದಾರೆ. ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಘಾತ ಸಂಭವಿಸುತ್ತಿದ್ದಂತೆಯೇ ಪ್ರಯಾಣಿಕರು ಎಕ್ಸಿಟ್ ಡೋರ್ ಮೂಲಕ ಹೊರಬಂದಿದ್ದಾರೆ. ಘಟನಾ ಸ್ಥಳಕ್ಕೆ ದೇವನಹಳ್ಳಿ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಪಘಾತದ ಬಳಿಕ ಕ್ರೇನ್ ಮೂಲಕ ಬಸ್ ಅನ್ನು ರಸ್ತೆಯ ಬದಿಗೆ ಎಳೆಯುವ ಕಾರ್ಯ ನಡೆಯಿತು. ಈ ಸಂಬಂಧ ದೇವನಹಳ್ಳಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.