
ಡೈಲಿ ವಾರ್ತೆ:JAN/02/2026
ಉಡುಪಿಯಲ್ಲಿ ನಿ. ಬೀ. ಅಣ್ಣಾಜಿ ಬಲ್ಲಾಳರ ಸ್ಮರಣಾರ್ಥ ಅಂಬಲಪಾಡಿ ನಾಟಕೋತ್ಸವ ಉದ್ಘಾಟನೆ: ರಂಗಭೂಮಿ ಬೆಳವಣಿಗೆಗೆ ಸಮಾಜದ ಸಹಕಾರ ಅಗತ್ಯ – ಡಾ.ತಲ್ಲೂರು

ಉಡುಪಿ, ಜ. 02 : ರಂಗಭೂಮಿ ಉಡುಪಿ ಸಂಸ್ಥೆ ಕಳೆದ 60 ವರ್ಷಗಳಿಂದ ನಿರಂತರ ರಂಗ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. ಇದರ ಬೆಳವಣಿಗೆಗೆ ದಿ.ಅಣ್ಣಾಜಿ ಬಲ್ಲಾಳರಂತಹ ಸಹೃದಯರ ಪ್ರೋತ್ಸಾಹವಿದೆ. ರಂಗಭೂಮಿ ಬೆಳವಣಿಗೆಗೆ ಸಮಾಜದ ಸಹಕಾರ ಅತ್ಯಗತ್ಯ ಎಂದು ರಂಗಭೂಮಿ ಉಡುಪಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.
ಅವರು ಬುಧವಾರ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ರಂಗಭೂಮಿ ಉಡುಪಿ ವತಿಯಿಂದ ಅಂಬಲಪಾಡಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಕಾರದಲ್ಲಿ ದಿ. ನಿ. ಬೀ. ಅಣ್ಣಾಜಿ ಬಲ್ಲಾಳರ ಸ್ಮರಣಾರ್ಥ ಹಮ್ಮಿಕೊಂಡ ಎರಡು ದಿನಗಳ ‘ಅಂಬಲಪಾಡಿ ನಾಟಕೋತ್ಸವ ‘ದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಂಗಭೂಮಿಗೆ ಅಂಬಲಪಾಡಿ ದೇವಳದ ಧರ್ಮದರ್ಶಿ ದಿ. ನಿ. ಬೀ. ಅಣ್ಣಾಜಿ ಬಲ್ಲಾಳರು ಹಾಗೂ ಹಾಲಿ ಧರ್ಮದರ್ಶಿ ಡಾ. ನಿ. ಬೀ. ವಿಜಯ ಬಲ್ಲಾಳ ಅವರ ಕೊಡುಗೆಯನ್ನು ಸ್ಮರಿಸಿದ ಅವರು, ದಾನಿಗಳು, ಸಂಘಸoಸ್ಥೆಗಳ ಸಹಕಾರದಿಂದಲೇ ರಂಗಭೂಮಿ ಬೆಳೆಯಬಲ್ಲದು. ಜಿಲ್ಲೆಯಲ್ಲಿ ಮಕ್ಕಳಿಗೆ ಯಕ್ಷ ಶಿಕ್ಷಣ ಅಭಿಯಾನ ತುಂಬಾ ಯಶಸ್ಸು ಕಂಡಿದೆ. ಇದೇ ಮಾದರಿಯಲ್ಲಿ ಮಕ್ಕಳಿಗೆ ರಂಗಭೂಮಿ ವತಿಯಿಂದ ರಂಗ ಶಿಕ್ಷಣವನ್ನು ನೀಡುವ ಕಾರ್ಯಕ್ಕೆ ನಾವು ಮುಂದಾಗಿದ್ದೇವೆ. ಈ ಅಭಿಯಾನದ ಯಶಸ್ಸಿಗೆ ಸಮಾಜದ ನೆರವು, ಪ್ರೋತ್ಸಾಹದ ಅ್ಯಗತ್ಯವಿದೆ ಎಂದು ಅವರು ತಿಳಿಸಿದರು.
ನಾಟಕೋತ್ಸವವನ್ನು ಹಿರಿಯ ರಂಗಕರ್ಮಿ ಪ್ರೊ. ಆರ್. ಎಲ್. ಭಟ್ ಉದ್ಘಾಟಿಸಿ ಶುಭ ಹಾರೈಸಿದರು.
ಸಾಫಲ್ಯ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷೆ ರಂಜನಾ ಶ್ರೀಧರ ಶೆಟ್ಟಿ ಹಾಗೂ ಟ್ರಸ್ಟ್ನ ಪ್ರವರ್ತಕಿ ನಿರುಪಮಾ ಪ್ರಸಾದ್ ಅವರು ರಂಗಭೂಮಿಯ ಚಟುವಟಿಕೆಗಳನ್ನು ಶ್ಲಾಘಿಸಿದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ರಂಗಭೂಮಿ ಉಡುಪಿ ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ ಅವರು, 2012ರಲ್ಲಿ ಅಂಬಲಪಾಡಿ ನಾಟಕೋತ್ಸವವನ್ನು ನಡೆಸಿಕೊಂಡು ಬರಲಾಗುತ್ತಿದ್ದು, ಧರ್ಮದರ್ಶಿ ದಿ. ಅಣ್ಣಾಜಿ ಬಲ್ಲಾಳರು ಧಾರ್ಮಿಕ ಚಟುವಟಿಕೆಗಳೊಂದಿಗೆ ರಂಗಭೂಮಿಯನ್ನು ನಿರಂತರವಾಗಿ ಪ್ರೋತ್ಸಾಸಿದ್ದಾರೆ. 1980ರಲ್ಲಿ ರಂಗಭೂಮಿ ಸಂಸ್ಥೆ ನಾಟಕ ಸ್ಪರ್ಧೆಯನ್ನು ಆರಂಭಿಸಿದಾಗ ದತ್ತಿನಿಧಿ ನೀಡಿ ಪ್ರೋತ್ಸಾಹಿಸಿದ್ದರು ಎಂಬುದನ್ನು ಅವರು ನೆನಪಿಸಿದರು.
ಕಾರ್ಯಕ್ರಮದಲ್ಲಿ ರಂಗಭೂಮಿ ಉಡುಪಿ ಉಪಾಧ್ಯಕ್ಷರುಗಳಾದ ಭಾಸ್ಕರ ರಾವ್ ಕಿದಿಯೂರು ಹಾಗೂ ಎನ್.ಆರ್.ಬಲ್ಲಾಳ್ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ನೀನಾಸಂ ತಂಡದಿಂದ ಭಾನುಮುಷ್ತಾಕ್ ಅವರ ಕಥಾಧಾರಿತ `ಹೃದಯದ ತೀರ್ಪು ‘ ನಾಟಕ ಪ್ರದರ್ಶನಗೊಂಡಿತು.