

ಡೈಲಿ ವಾರ್ತೆ:JAN/05/2026

ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭ: ಬರವಣಿಗೆಯಲ್ಲಿ ಜವಾಬ್ದಾರಿ ಮತ್ತು ವಾಸ್ತವಾಂಶ ಇರಲಿ – ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ


ಕೋಟ, ಜ.5: ಮಾಧ್ಯಮಗಳಲ್ಲಿ ಪ್ರಕಟವಾಗುವ ಸುದ್ದಿಗಳು ಸಾರ್ವಕಾಲಿಕ ದಾಖಲೆಗಳಾಗಿ ಉಳಿಯುತ್ತದೆ ಹಾಗೂ ಸುದ್ದಿಯಲ್ಲಿ ತಪ್ಪುಗಳು ನಡೆದರೆ ಅದನ್ನು ಸರಿಪಡಿಸುವುದು ಅಷ್ಟು ಸುಲಭವಲ್ಲ. ಹೀಗಾಗಿ ಸುದ್ದಿಗಳನ್ನು ತಿರುಚುವ ಮನಃಸ್ಥಿತಿ ಮಾಧ್ಯಮಲೋಕಕ್ಕೆ ಅಪಾಯವಾಗಲಿದೆ ಆದ್ದರಿಂದ ಬರವಣಿಗೆಯಲ್ಲಿ ಜವಾಬ್ದಾರಿ ಮತ್ತು ವಾಸ್ತವಾಂಶ ಇರಬೇಕು ಎಂದು ಮಾಜಿ ಸಚಿವ ಕೆ. ಜಯಪ್ರಕಾಶ ಹೆಗ್ಡೆ ಹೇಳಿದರು.

ಅವರು ಸಾಸ್ತಾನ ಪಾಂಡೇಶ್ವರದ ಕೋಸ್ಟಲ್ ಪ್ಯಾರಡೈಸ್ ಅನುಗ್ರಹ ಸಭಾಂಗಣದಲ್ಲಿ ಉಡುಪಿ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಬ್ರಹ್ಮಾವರ ತಾಲ್ಲೂಕು ಪತ್ರಕರ್ತರ ಸಂಘದ ವತಿಯಿಂದ ಭಾನುವಾರ ನಡೆದ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಜನಾಭಿಪ್ರಾಯ ಮೂಡಿಸುವ ಕೆಲಸ ಪತ್ರಿಕೆ, ಮಾಧ್ಯಮಗಳು ಮಾಡುತ್ತವೆ. ಅದ್ದರಿಂದ ಸಮಾಜಕ್ಕೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ನೈಜತೆಯ ಸುದ್ದಿಯನ್ನು ನೀಡುವತ್ತ ಪತ್ರಿಕಾರಂಗ ಇರಬೇಕು ಎಂದ ಅವರು
ವಡ್ಡರ್ಸೆ ಅವರು ಹಿಂದುಳಿದ ವರ್ಗದವರ ಬಗ್ಗೆ ಹೆಚ್ಚಿನ ಒಲವು ತೋರಿಸಿದ್ದರು ಎಂದು ಹೇಳಿದರು.


ಸಮಾರಂಭವನ್ನು ಉದ್ಘಾಟಿಸಿದ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ವಡ್ಡರ್ಸೆ ರಘುರಾಮ ಶೆಟ್ಟಿ ಅವರು ಪತ್ರಿಕೆಗೆ ಮೌಲ್ಯವನ್ನು ತಂದು ಕೊಟ್ಟವರು. ಇಂದಿನ ಪತ್ರಕರ್ತರಿಗೆ ಮಾದರಿ ಮತ್ತು ಪ್ರೇರಕರಾಗಿದ್ದರು ಎಂದು ಹೇಳಿದರು.

ಬ್ರಹ್ಮಾವರ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ ಗಾಣಿಗ ಅಚ್ಲಾಡಿ ಅಧ್ಯಕ್ಣತೆ ವಹಿಸಿದ್ದರು.
ಇದೇ ಸಂದರ್ಭ ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಅವರಿಗೆ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.


ಉಡುಪಿ ಶಾಸಕ ಯಶಪಾಲ್ ಸುವರ್ಣ, ಬ್ರಹ್ಮಾವರ ಬಂಟರ ಸಂಘದ ಸಂಚಾಲಕ ಬಿ.ಭುಜಂಗ ಶೆಟ್ಟಿ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರತಿನಿಧಿ ಆಸ್ಟ್ರೋ ಮೋಹನ್ , ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕುಂದಾಪುರ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ ರಾಯಪ್ಪನಮಠ
ಇದ್ದರು.
ಕಾರ್ಯಕ್ರಮದ ಸಂಚಾಲಕ ವಸಂತ ಗಿಳಿಯಾರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಘದ ಸ್ಥಾಪಕಾಧ್ಯಕ್ಷ ಚಿತ್ತೂರು ಪ್ರಭಾಕರ ಆಚಾರ್ಯ ಸ್ವಾಗತಿಸಿದರು.
ಪ್ರಧಾನ ಕಾರ್ಯದರ್ಶಿ ಹರೀಶ ಕಿರಣ್ ತುಂಗ ವಂದಿಸಿದರು. ಉಪಾಧ್ಯಕ್ಷ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.