

ಡೈಲಿ ವಾರ್ತೆ:JAN/05/2026

ಕೋಟ| ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು

ಕೋಟ, ಜ. 05: ಬ್ರಹ್ಮಾವರ ತಾಲೂಕಿನ ಸಾೖಬ್ರಕಟ್ಟೆ ಸಮೀಪ ಕಳ್ಳಾಡಿಯಲ್ಲಿ ಕಾಲೇಜು ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಜ. 4 ರಂದು ಭಾನುವಾರ ನಡೆದಿದೆ.
ಮೃತಪಟ್ಟ ವಿದ್ಯಾರ್ಥಿ ಇಲ್ಲಿಗೆ ಸಮೀಪದ ಖಾಸಗಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿರುವ ವಂಶಿತ್ ( 17) ಎಂದು ತಿಳಿದುಬಂದಿದೆ. ಮೃತ ವಿದ್ಯಾರ್ಥಿಯ ತಂದೆ ಮಂದಾರ್ತಿ ಮೆಸ್ಕಾಂ ಉದ್ಯೋಗಿಯಾಗಿದ್ದು ತಾಯಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದಾರೆ.
ಜ. 4 ರಂದು ತಂದೆ ಮಂಜುನಾಥ್ ಶೆಟ್ಟಿಗಾರ್ ತನ್ನ ಅಕ್ಕ ಭಾವನ ಜೊತೆ ಕಾರ್ಕಳಕ್ಕೆ ಕಾರ್ಯಕ್ರಮ ನಿಮಿತ್ತ ಹೋಗಿದ್ದು, ತಾಯಿ ಬ್ಯೂಟಿ ಪಾರ್ಲರ್ ಗೆ ತೆರಳಿದ್ದರು. ಮಂಜುನಾಥ ಶೆಟ್ಟಿಗಾರ್ ಅವರ ಭಾವನ ಸ್ಕೂಟರ್ ಮನೆಯಲ್ಲೇ ಇದ್ದು ಆನಂತರ ವಂಶಿತ್ ಸ್ಕೂಟಿಯನ್ನು ಚಲಾಯಿಸಿಕೊಂಡು ಹೊರಗಡೆ ಹೋದಾಗ ಗಾಡಿ ಸ್ಕಿಡ್ ಆಗಿ ಬಿದ್ದಿದ್ದು, ಗಾಡಿಯ ಕಿಕ್ಕರ್ ತುಂಡಾಗಿದ್ದು ಭಾನುವಾರ ಆದ ಕಾರಣ ಯಾವುದೇ ಗ್ಯಾರೇಜ್ ಓಪನ್ ಇರದ ಕಾರಣ ಮನೆಗೆ ವಾಪಸ್ ಆಗಿದ್ದರು. ಗಾಡಿ ಕಿಕ್ಕರ್ ತುಂಡಾಗಿ ಹೋಗಿದ್ದರಿಂದ ಭಯಗೊಂಡ ವಂಶಿತ್ ಮನೆಯವರು ಜೋರು ಮಾಡಬಹುದು ಎಂಬ ಭಯದಿಂದ ಅಪರಾಹ್ನ 1 ಗಂಟೆಯ ನಂತರ ನಾಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದೆ.
ಮನೆಯವರು ಕಾರ್ಯಕ್ರಮ ಮುಗಿಸಿ ಬಂದಾಗ ವಂಶಿತ್ ಮನೆಯಲ್ಲಿ ಇಲ್ಲದೇ ಇರುವುದನ್ನು ತಿಳಿದು ಹುಡುಕಾಟ ಆರಂಭಿಸಿದ್ದರು. ಸಂಜೆಯವರೆಗೆ ಹುಡುಕಾಟ ನಡೆಸಿದ ಮನೆಯವರು ಅಲ್ಲಿಯೇ ಹತ್ತಿರ ನಿರ್ಮಾಣಗೊಳ್ಳುತ್ತಿರುವ ರೆಸಾರ್ಟ್ ಗುಂಡಿಯ ಮೇಲ್ಭಾಗದಲ್ಲಿ ವಂಶಿತ್ ಚಪ್ಪಲಿ ಮತ್ತು ಶರ್ಟ್ ಪತ್ತೆೆಯಾಗಿದೆೆ. ಗುಂಡಿಯಲ್ಲಿ ಹುಡುಕಾಟ ನಡೆಸಿದಾಗ ಶವ ಪತ್ತೆಯಾಗಿದೆ.
ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.