

ಡೈಲಿ ವಾರ್ತೆ:JAN/06/2026

ಉಡುಪಿ| ರಿಕ್ಷಾದಲ್ಲಿ ಎಂ.ಡಿ.ಎಂ.ಎ. ಮಾರಾಟ – ಆರೋಪಿಯ ಬಂಧನ, 3 ಲಕ್ಷ ಮೌಲ್ಯದ ಸೊತ್ತು ವಶ

ಉಡುಪಿ, ಜ. 06: ನಗರದಲ್ಲಿ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಜಾಲದ ವಿರುದ್ಧ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಆಟೋರಿಕ್ಷಾದಲ್ಲಿ ಎಂ.ಡಿ.ಎಂ.ಎ ಪೌಡರ್ ಮಾರಾಟ ಮಾಡುತ್ತಿದ್ದ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಉಡುಪಿ ತಾಲೂಕಿನ ಶಿವಳ್ಳಿ ಗ್ರಾಮದ ದೊಡ್ಡನಗುಡ್ಡೆ ನಿವಾಸಿ ಅಬ್ದುಲ್ ರೌಫ್ (26) ಎಂದು ಗುರುತಿಸಲಾಗಿದೆ.
ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಪ್ರಭು ಡಿ.ಟಿ ಅವರ ಮಾರ್ಗದರ್ಶನದಲ್ಲಿ, ನಗರ ಠಾಣಾ ಪ್ರಭಾರ ಪೊಲೀಸ್ ನಿರೀಕ್ಷಕರಾದ ಮಹೇಶ ಪ್ರಸಾದ್ ನೇತೃತ್ವದ ತಂಡವು ಈ ಕಾರ್ಯಾಚರಣೆ ನಡೆಸಿದ್ದು. ಶಿವಳ್ಳಿ ಗ್ರಾಮದ ಕರಂಬಳ್ಳಿ ರಾಮಬೆಟ್ಟು ಸಮೀಪದ ಸಾರ್ವಜನಿಕ ಸ್ಥಳದಲ್ಲಿ KA20AC 5863 ಸಂಖ್ಯೆಯ ಆಟೋರಿಕ್ಷಾದಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ.
ಬಂಧಿತನಿಂದ 7.59 ಗ್ರಾಂ ತೂಕದ MDMA ಅಂದಾಜು ಮೌಲ್ಯ 15,000 ರೂಪಾಯಿ, MDMA ಮಾರಾಟ ಮಾಡಿ ಗಳಿಸಿದ್ದ 3100 ರೂ ಜೊತೆಗೆ ಕೃತ್ಯಕ್ಕೆ ಬಳಸಿದ ರಿಕ್ಷಾ ಸೇರಿ ಒಟ್ಟು 3,23,100 ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ NDPS ಕಾಯ್ದೆಯ ಕಲಂ 8(c), 22(b) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಕಾರ್ಯಾಚರಣೆಯಲ್ಲಿ ಪಿಎಸ್‌ಐಗಳಾದ ಭರತೇಶ ಕಂಕಣವಾಡಿ, ಗೋಪಾಲ ಕೃಷ್ಣ ಜೋಗಿ ಹಾಗೂ ಸಿಬ್ಬಂದಿಗಳಾದ ಹರೀಶ್ ನಾಯ್ಕ, ಪ್ರಸನ್ನ.ಸಿ. ನೇತ್ರಾವತಿ, ಸತೀಶ್ ಪಳ್ಳಿ, ಹೇಮಂತ್ ಕುಮಾರ್, ಸಂತೋಷ್ ರಾತೋಡ್ ಮತ್ತು ಆನಂದ್ ಪಾಲ್ಗೊಂಡಿದ್ದರು.