ಡೈಲಿ ವಾರ್ತೆ:JAN/08/2026

ಮದುವೆ ಮಾಡಲಿಲ್ಲ ಎಂದು ರಾಡ್‌ನಿಂದ ಹೊಡೆದು ತಂದೆಯನ್ನೇ ಕೊಲೆಗೈದ ಪುತ್ರ!

ಚಿತ್ರದುರ್ಗ, ಜ. 08: ಸಕಾಲಕ್ಕೆ ಮದುವೆ ಮಾಡಲಿಲ್ಲವೆಂದು ಆಕ್ರೋಶಗೊಂಡ ಪಾಪಿಪುತ್ರನೋರ್ವ ಹೆತ್ತ ತಂದೆಯನ್ನೇ ಬರ್ಬರವಾಗಿ ಕೊಲೆಗೈದಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಅತಿಘಟ್ಟ ಗ್ರಾಮದಲ್ಲಿ ನಡೆದಿದೆ.

ಮದುವೆ ವಿಚಾರಕ್ಕೆ ತಂದೆಯೊಂದಿಗೆ ನಿತ್ಯ ಪುತ್ರ ಜಗಳ ಮಾಡುತ್ತಿದ್ದ. ಈ ಬಗ್ಗೆ ಕುಟುಂಬಸ್ಥರು ಎಷ್ಟೇ ಬುದ್ದಿವಾದ ಹೇಳಿದರೂ ಜಗಳ ಮಾತ್ರ ನಿಲ್ಲಿಸಿರಲಿಲ್ಲ. ಇದೇ ವಿಚಾರಕ್ಕೆ ಸಿಟ್ಟಾಗಿದ್ದ ಪುತ್ರ, ಮಲಗಿದ್ದ ವೇಳೆ ತಂದೆಗೆ ರಾಡ್‌ನಿಂದ ಹೊಡೆದು ಕೊಲೆ ಮಾಡಿದ್ದಾನೆ.

ಹೊಸದುರ್ಗ ತಾಲೂಕಿನ ಅತ್ತಿಘಟ್ಟ ಗ್ರಾಮದ ಸಣ್ಣನಿಂಗಪ್ಪ ಎಂಬುವರು ಪುತ್ರ ನಿಂಗರಾಜನಿಂದ ಹತ್ಯೆಯಾಗಿದ್ದಾರೆ.
ಮೃತ ಸಣ್ಣನಿಂಗಪ್ಪಗೆ ಮೂವರು ಮಕ್ಕಳು. ಆರೋಪಿ ನಿಂಗರಾಜ ಎರಡನೇ ಮಗನಾಗಿದ್ದಾನೆ. ಹಿರಿಯ ಮಗ ಮಾರುತಿ ಹಾಗೂ ಕಿರಿಯ ಮಗಳು ಜ್ಯೋತಿಗೆ ಮದುವೆಯಾಗಿತ್ತು. ಆದರೆ, ನಿಂಗರಾಜನಿಗೆ ಮದುವೆ ಆಗಿರಲಿಲ್ಲ. ಇದೇ ವಿಚಾರಕ್ಕೆ ತಂದೆ ಸಣ್ಣ ನಿಂಗಪ್ಪ ಜತೆ ಜಗಳ ಮಾಡಿದ್ದಾನೆ. ಈ ವೇಳೆ ಹೊಸದುರ್ಗದಲ್ಲಿ ಇದ್ದ ಹಿರಿಯ ಮಗ ಮಾರುತಿಯನ್ನು ಮನೆಗೆ ಕರೆಸಿ ಬುದ್ದಿ ಹೇಳಿಸಿದ್ದಾರೆ. ಆಗ ಸುಮ್ಮನೇ ಆಗಿದ್ದ ನಿಂಗರಾಜ, ಮನೆಯಲ್ಲಿ ಮಲಗಿದ್ದ ತಂದೆಗೆ ರಾಡ್‌ನಿಂದ ಹೊಡೆದು ಪರಾರಿ ಆಗಿದ್ದಾನೆ.

ಗಂಭೀರವಾಗಿ ಗಾಯಗೊಂಡಿದ್ದ ಸಣ್ಣ ನಿಂಗಪ್ಪನನ್ನು ಹೊಸದುರ್ಗ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗಲಾದೆ. ಆದರೆ, ಆ ವೇಳೆಗೆ ವ್ಯಕ್ತಿ ಮೃತಪಟ್ಟಿರುವುದಾಗಿ ವೈದ್ಯರು ಖಚಿತ ಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹಿರಿಯ ಮಗ ಮಾರುತಿ, ಹೊಸದುರ್ಗ ಪೊಲೀಸ್ ಠಾಣೆಗೆ ತೆರಳಿ ತಮ್ಮ ನಿಂಗರಾಜ ವಿರುದ್ಧ ದೂರು ನೀಡಿದ್ದಾರೆ. ಈ ಕುರಿತು ಕೇಸ್‌ ದಾಖಲಿಸಿಕೊಂಡ ಪಿಎಸ್ಐ ಮಹೇಶ್ ಕುಮಾರ್. ಎಸ್, ಕ್ರೈಂ ಪಿಸಿ ರಮೇಶ್ ಅವರು ಕೊಲೆ ಆರೋಪಿ ನಿಂಗರಾಜನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.