ಡೈಲಿ ವಾರ್ತೆ:JAN/15/2026

ಬಾಲಕನ ನಿಗೂಢ ಸಾವು ಪ್ರಕರಣ: ಬಾವಿಗೆ ಬಿದ್ದಾಗ ಜೀವಂತವಿದ್ದ ಪೋಸ್ಟ್ ಮಾರ್ಟಮ್ ವರದಿ,
ಕೊಲೆ ಪ್ರಕರಣ ದಾಖಲಿಸಿ ತನಿಖೆ ಚುರುಕುಗೊಳಿಸಿದ ಪೊಲೀಸರು !

ಬೆಳ್ತಂಗಡಿ: ಓಡಿಲ್ನಾಳದ ಸಂಭೋಳ್ಯದಲ್ಲಿ ಮನೆಯಿಂದ ಧನು ಪೂಜೆಗೆಂದು ಹೊರಟ ಬಾಲಕ ನಿಗೂಢವಾಗಿ ಸಾವನಪ್ಪಿದ ಪ್ರಕರಣವನ್ನು ಇದೀಗ ಅಸಹಜ ಸಾವು ಪ್ರಕರಣದಿಂದ ಕೊಲೆ ಪ್ರಕರಣವಾಗಿ ಪರಿವರ್ತಿಸಿ ತನಿಖೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.

ಕುವೆಟ್ಟು ಪಂಚಾಯತ್ ಓಡಿಲ್ನಾಳ ಗ್ರಾಮದ ಸಂಬೋಳ್ಯ ಸಮೀಪದ ಬರಮೇಲು ಎಂಬಲ್ಲಿ ಬುಧವಾರ (ಜ.14) ಬೆಳಗ್ಗೆ ಧನು ಪೂಜೆಗೆ ಹೋದ 9ನೇ ತರಗತಿ ವಿದ್ಯಾರ್ಥಿ ಸುಮಂತ್ (15) ನಾಪತ್ತೆಯಾಗಿದ್ದು, ಕೆಲಕಾಲದ ಹುಡುಕಾಟದ ಬಳಿಕ ಬಾವಿಯಲ್ಲಿ ನಿಗೂಢವಾಗಿ ಶವವಾಗಿ ಪತ್ತೆಯಾಗಿದ್ದ. ಆದರೆ ಈ ವೇಳೆ ತೋಟದಲ್ಲಿ ಸಿಕ್ಕ ರಕ್ತದ ಕಲೆಗಳು ಮತ್ತು ಮೃತದೇಹದ ಮೇಲಿನ ಗಾಯದ ಗುರುತಿನ ಕಾರಣದಿಂದ ಅನುಮಾನಕ್ಕೆ ಕಾರಣವಾಗಿತ್ತು.

ಶವ ಪರೀಕ್ಷೆಯ ನಂತರ ಬಂದ ಪ್ರಾಥಮಿಕ ವರದಿಯ ಪ್ರಕಾರ, ಸುಮಂತ್ ಕೆರೆಯಲ್ಲಿ ಮುಳುಗುವ ಸಮಯ ಜೀವಂತನಾಗಿದ್ದು, ಬಳಿಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.

ಪ್ರಾಥಮಿಕ ವರದಿಯಲ್ಲಿ ತಿಳಿಸಿದಂತೆ ತಲೆಯ ಮೇಲೆ ಸಣ್ಣ ಪ್ರಮಾಣದ ಗಾಯಗಳು ಉಂಟಾಗಿವೆ. ಯಾವುದೇ ಚೂಪಾದ ಆಯುಧಗಳಿಂದ ಆಗಿರುವ ಗಾಯ ಅಲ್ಲ ಎಂದು ತಿಳಿದುಬಂದಿದೆ. ಆದರೆ ತಲೆಯ ಮೇಲಿನ ಗಾಯಗಳ ಬಗ್ಗೆ ಸಮರ್ಪಕವಾದ ವಿವರಣೆ ದೊರಕಿಲ್ಲ ಎನ್ನಲಾಗಿದೆ.

ಹೀಗಾಗಿ ಈ ಪ್ರಕರಣದ ಸಮಗ್ರ ತನಿಖೆಗಾಗಿ ಬೆಳ್ತಂಗಡಿ ಡಿಎಸ್‌ಪಿ ಅವರ ನೇತೃತ್ವದಲ್ಲಿ ನಾಲ್ಕು ತಂಡಗಳನ್ನು ರಚಿಸಲಾಗಿದೆ. ಪ್ರಕರಣದ ಕುರಿತು ತನಿಖೆಗಾಗಿ ಒಂದೆಡೆ ಬಾವಿಯಲ್ಲಿನ ನೀರು ಸಂಪೂರ್ಣ ಖಾಲಿ ಮಾಡಲಾಗುತ್ತಿದೆ. ಇನ್ನೊಂದೆಡೆ ಕಾಡಿನ ಸುತ್ತ ಮುತ್ತ ಸುಳಿವಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.