ಡೈಲಿ ವಾರ್ತೆ:JAN/16/2026

ಮಣಿಪಾಲ| ಸ್ಕೂಟರ್ ಕಳವು ಪ್ರಕರಣ – ಇಬ್ಬರು ಅಂತರ್ ಜಿಲ್ಲಾ ಕಳ್ಳರ ಬಂಧನ

ಮಣಿಪಾಲ: ಇಲ್ಲಿನ ಶಿವಳ್ಳಿ ಗ್ರಾಮದ ಕಾಯಿನ್ ಸರ್ಕಲ್ ಸಮೀಪವಿರುವ ಹಾಟ್ & ಸ್ಪೈಸ್ ಹೋಟೆಲ್ ಮುಂಭಾಗ ನಿಲ್ಲಿಸಲಾಗಿದ್ದ ಸ್ಕೂಟರ್ ಕಳವು ಮಾಡಿದ್ದ ಇಬ್ಬರು ಕಳ್ಳರನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಕಿರಣ ಬಿ.ಎನ್. (32) ಮತ್ತು ನಿದಿಗಿ ನಿವಾಸಿ ಯೋಗೇಶ್ ನಾಯ್ಕ ಎನ್. (22) ಎಂದು ಗುರುತಿಸಲಾಗಿದೆ.

ಕಳೆದ ಆಗಸ್ಟ್ 30, 2025ರಂದು ಸಂಜೆ ಹೆರ್ಗಾ ಗ್ರಾಮದ ಪ್ರದೀಪ್ ಸಾಲ್ಯಾನ್ ಅವರು ತಮ್ಮ ಹೊಂಡಾ ಆಕ್ಟಿವಾ ಸ್ಕೂಟರ್ ಅನ್ನು ಕಾಯಿನ್ ಸರ್ಕಲ್ ಬಳಿ ನಿಲ್ಲಿಸಿದ್ದರು. ರಾತ್ರಿ 7.30 ರಿಂದ 10.30ರ ನಡುವಿನ ಸಮಯದಲ್ಲಿ ಅಜ್ಞಾತ ವ್ಯಕ್ತಿಗಳು ಸ್ಕೂಟರ್ ಅನ್ನು ಕಳ್ಳತನ ಮಾಡಿದ್ದರು.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಬಿಎನ್‌ಎಸ್ ಕಲಂ 303(2) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಕಳವು ಆದ ಸ್ಕೂಟರ್‌ನ ಮೌಲ್ಯ ಸುಮಾರು 30 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿತ್ತು.

ಉಡುಪಿ ಡಿವೈಎಸ್ಪಿ ಪ್ರಭು ಡಿ.ಟಿ. ಅವರ ಮಾರ್ಗದರ್ಶನ ಹಾಗೂ ಮಣಿಪಾಲ ಠಾಣಾ ನಿರೀಕ್ಷಕ ಮಹೇಶ್ ಪ್ರಸಾದ್ ಅವರ ಮೇಲ್ವಿಚಾರಣೆಯಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ಉಪನಿರೀಕ್ಷಕರಾದ ಅನಿಲ್ ಬಿ.ಎಂ. ಮತ್ತು ಅಕ್ಷಯ ಕುಮಾರಿ ಎಸ್.ಎನ್. ನೇತೃತ್ವದ ಅಪರಾಧ ಪತ್ತೆ ತಂಡವು ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ತನಿಖೆ ನಡೆಸಿ, ಜನವರಿ 7ರಂದು ಆರೋಪಿಗಳನ್ನು ಶಿವಮೊಗ್ಗದಲ್ಲಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ.

ಬಂಧಿತ ಆರೋಪಿಗಳ ಪೈಕಿ ಕಿರಣ ಬಿ.ಎನ್. ಎಂಬಾತ ಹಳೇ ಅಪರಾಧಿಯಾಗಿದ್ದು, ಈತನ ವಿರುದ್ಧ ಈ ಹಿಂದೆಯೂ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿರುವುದು ತನಿಖೆಯ ವೇಳೆ ತಿಳಿದುಬಂದಿದೆ. ಸದ್ಯ ಆರೋಪಿಗಳಿಂದ ಕಳವು ಮಾಡಿದ್ದ ಸ್ಕೂಟರ್ ಅನ್ನು ವಶಪಡಿಸಿಕೊಳ್ಳಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.