ಡೈಲಿ ವಾರ್ತೆ:JAN/22/2026

ರಾಜ್ಯಪಾಲರ ನಡೆ ಸಂವಿಧಾನ ವಿರೋಧಿ, ಪ್ರತಿನಿಧಿ ಸಭೆಗೆ ಅವಮಾನ – ಸಿಎಂ ಸಿದ್ದರಾಮಯ್ಯ ಕಿಡಿ

ಬೆಂಗಳೂರು: ರಾಜ್ಯಪಾಲರು ಸರ್ಕಾರದ ಭಾಷಣವನ್ನು ಓದದೇ, ತಮ್ಮದೇ ಭಾಷಣದ ಒಂದೇ ವಾಕ್ಯವನ್ನು ಓದಿ ಜಂಟಿ ಅಧಿವೇಶನವನ್ನು ಮುಕ್ತಾಯಗೊಳಿಸಿರುವುದು ಸಂವಿಧಾನ ವಿರೋಧಿ ಹಾಗೂ ಪ್ರತಿನಿಧಿ ಸಭೆಗೆ ಮಾಡಿದ ಸ್ಪಷ್ಟ ಅವಮಾನ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರು ಮಾತನಾಡಬೇಕಾದ ಭಾಷಣವನ್ನು ಸಚಿವ ಸಂಪುಟವೇ ತಯಾರಿಸುತ್ತದೆ. ಆದರೆ ಅದನ್ನು ಓದುವ ಬದಲು, ರಾಜ್ಯಪಾಲರು ಸ್ವಯಂ ತಯಾರಿಸಿದ ಭಾಷಣವನ್ನು ಮಾಡಿದ್ದಾರೆ. ಇದು ಭಾರತೀಯ ಸಂವಿಧಾನದ 176 ಮತ್ತು 163ನೇ ವಿಧಿಗಳಿಗೆ ಸ್ಪಷ್ಟ ಉಲ್ಲಂಘನೆ ಎಂದು ಹೇಳಿದರು.

ರಾಜ್ಯಪಾಲರು ಸಂವಿಧಾನದ ಪ್ರಕಾರ ನಡೆದುಕೊಳ್ಳದೆ, ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸಿದ್ದಾರೆ. ಸಂವಿಧಾನಬದ್ಧ ಕರ್ತವ್ಯವನ್ನು ನಿರ್ವಹಿಸದ ರಾಜ್ಯಪಾಲರ ನಡವಳಿಕೆಯ ವಿರುದ್ಧ ಸರ್ಕಾರ ಪ್ರತಿಭಟನೆ ನಡೆಸಲಿದೆ. ಅಗತ್ಯವಿದ್ದರೆ ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗುವ ಕುರಿತು ಪರಿಶೀಲಿಸಲಾಗುತ್ತಿದೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಜಂಟಿ ಅಧಿವೇಶನದ ಜೊತೆಗೆ ವಿಶೇಷ ಅಧಿವೇಶನವನ್ನು ಕರೆಯಲಾಗಿತ್ತು. ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಹೆಸರನ್ನು ತೆಗೆದುಹಾಕಿ ಕೇಂದ್ರ ಸರ್ಕಾರ ಜಿ. ರಾಮಜಿ ಎಂಬ ಹೊಸ ಕಾಯ್ದೆಯನ್ನು ಜಾರಿಗೆ ತಂದಿದೆ. ಇದಕ್ಕೆ ನಮ್ಮ ಸರ್ಕಾರದ ತೀವ್ರ ವಿರೋಧವಿದೆ.

ಹಳ್ಳಿಗಳಲ್ಲಿರುವ ಬಡ ಕಾರ್ಮಿಕರಿಗೆ ಕನಿಷ್ಠ 100 ದಿನಗಳ ಉದ್ಯೋಗ ಖಾತ್ರಿ ನೀಡುವ ಉದ್ದೇಶ ಈ ಕಾಯ್ದೆಯಲ್ಲಿ ಕಾಣುತ್ತಿಲ್ಲ. ಹಿಂದೆ ಕಾರ್ಮಿಕರು ತಮ್ಮ ಜಮೀನಿನಲ್ಲಿ ಕೆಲಸ ಮಾಡಬಹುದಾಗಿತ್ತು, ಈಗ ಕೇಂದ್ರ ಸರ್ಕಾರವೇ ಕೆಲಸದ ಸ್ಥಳವನ್ನು ನಿರ್ಧರಿಸುವಂತಾಗಿದೆ ಎಂದು ಅವರು ಟೀಕಿಸಿದರು.

ಇದೇ ವೇಳೆ, ವಿಶೇಷ ಅಧಿವೇಶನ ಆರಂಭದಲ್ಲಿ ರಾಜ್ಯಪಾಲರು ಕೇವಲ ಒಂದೇ ವಾಕ್ಯದಲ್ಲಿ ಭಾಷಣ ಮಾಡಿ ಸದನದಿಂದ ನಿರ್ಗಮಿಸಿದ ಕ್ರಮದ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವರು ಹಾಗೂ ಶಾಸಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ನಡೆ ರಾಜ್ಯದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತಂದಿದೆ ಎಂದು ಸರ್ಕಾರ ಆರೋಪಿಸಿದೆ.