

ಡೈಲಿ ವಾರ್ತೆ:JAN/24/2026
ದಿನಕರ ದೇಸಾಯಿ ಪ್ರಶಸ್ತಿ ವಿಜೇತ ಚುಟುಕು ಕವಿ ಗಣೇಶ್ ವೈದ್ಯ ಇನ್ನಿಲ್ಲ

ಉಡುಪಿ: ಪ್ರಖ್ಯಾತ ಚುಟುಕು ಕವಿ, ದಿನಕರ ದೇಸಾಯಿ ಪ್ರಶಸ್ತಿ ವಿಜೇತ ಹಾಗೂ ಉಪ್ಪುಂದ ನಿವಾಸಿ ಗಣೇಶ್ ವೈದ್ಯ (53) ಅವರು ಜನವರಿ 23ರಂದು ಹೃದಯಾಘಾತದಿಂದ ಉಡುಪಿಯಲ್ಲಿ ನಿಧನರಾದರು.
ಅವರ ನಿಧನದಿಂದ ಕನ್ನಡ ಸಾಹಿತ್ಯ ಲೋಕಕ್ಕೆ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಅಪಾರ ನಷ್ಟ ಉಂಟಾಗಿದೆ.
ಸರಳ ಪದಗಳಲ್ಲಿ ಆಳವಾದ ಅರ್ಥ ತುಂಬುವ ಚುಟುಕು ಕವಿತೆಗಳ ಮೂಲಕ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ವಿಶಿಷ್ಟ ಗುರುತನ್ನು ಗಳಿಸಿದ್ದ ಗಣೇಶ್ ವೈದ್ಯ ಅವರು, ಅನೇಕ ಜನಪ್ರಿಯ ಕೃತಿಗಳನ್ನು ರಚಿಸಿ ಓದುಗರ ಮನಸ್ಸು ಗೆದ್ದಿದ್ದರು. ಅವರ ಚುಟುಕು ಕವಿತೆಗಳು ಸಾಮಾಜಿಕ ವಾಸ್ತವತೆ, ಜೀವನದ ಸೂಕ್ಷ್ಮತೆ ಹಾಗೂ ಹಾಸ್ಯದ ಸೊಗಡನ್ನು ಒಳಗೊಂಡು ಅಪಾರ ಜನಮನ್ನಣೆ ಪಡೆದಿದ್ದವು.
ಸಾಹಿತ್ಯ ಕ್ಷೇತ್ರದ ಜೊತೆಗೆ ಚೆಸ್ ತರಬೇತುದಾರರಾಗಿಯೂ ಸೇವೆ ಸಲ್ಲಿಸಿದ್ದ ಅವರು, ಅನೇಕ ವಿದ್ಯಾರ್ಥಿಗಳಿಗೆ ಚೆಸ್ ತರಗತಿಗಳನ್ನು ನಡೆಸಿ ಮಾರ್ಗದರ್ಶನ ನೀಡಿದ್ದರು.
ದ್ವಾರಕ ಚೆಸ್ ಸ್ಕೂಲ್‌ನ ಸಂಸ್ಥಾಪಕರಾಗಿಯೂ, ಕುವೆಂಪು ವಿಶ್ವವಿದ್ಯಾಲಯದ ಮಾಜಿ ಚೆಸ್ ಕೋಚ್ ಆಗಿಯೂ ಕಾರ್ಯನಿರ್ವಹಿಸಿದ್ದ ಅವರು, ಜ್ಯೋತಿಷ್ಯ ಕ್ಷೇತ್ರದಲ್ಲಿಯೂ ತಮ್ಮದೇ ಆದ ಹೆಸರನ್ನು ಮಾಡಿಕೊಂಡಿದ್ದರು.
ಗಣೇಶ್ ವೈದ್ಯ ಅವರು ತಾಯಿ, ಪತ್ನಿ, ಇಬ್ಬರು ಮಕ್ಕಳು, ಸಹೋದರ–ಸಹೋದರಿಯರು ಹಾಗೂ ಅಪಾರ ಸ್ನೇಹಿತರು, ಸಾಹಿತ್ಯಪ್ರೇಮಿಗಳು ಮತ್ತು ಅಭಿಮಾನಿಗಳನ್ನು ಅಗಲಿದ್ದಾರೆ.
ಅವರ ನಿಧನದ ಸುದ್ದಿ ತಿಳಿದು ಸಾಹಿತ್ಯಪ್ರೇಮಿಗಳು, ಸ್ನೇಹಿತರು ಹಾಗೂ ಅಭಿಮಾನಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಗಣೇಶ್ ವೈದ್ಯ ಅವರ ಸೃಜನಶೀಲ ಸಾಹಿತ್ಯ ಪರಂಪರೆ ಸದಾ ಜೀವಂತವಾಗಿರಲಿದೆ ಎಂದು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.