

ಡೈಲಿ ವಾರ್ತೆ:JAN/24/2026


ಬಸ್ ಟೈಮಿಂಗ್ ವಿಚಾರಕ್ಕೆ
ಚಾಲಕರ ನಡುವಿನ ಜಗಳ:
ಮಾರಣಾಂತಿಕ ಹಲ್ಲೆ

ಉಡುಪಿ: ಬಸ್ ಟೈಮಿಂಗ್ ವಿಚಾರವಾಗಿ ಉಂಟಾದ ವಿವಾದವು ಮಾರಣಾಂತಿಕ ಹಲ್ಲೆಗೆ ತಿರುಗಿದ ಘಟನೆ ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಸರ್ವಿಸ್ ಬಸ್ ನಿಲ್ದಾಣದಲ್ಲಿ ನಡೆದಿದೆ.
ನವದುರ್ಗಾ ಬಸ್ (KA-20 AC-3467) ನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿರುವ ವಡ್ಡರ್ಸೆ ಗ್ರಾಮದ ಎಂ.ಜಿ ಕಾಲೋನಿ ನಿವಾಸಿ ರಿಯಾಜ್ (41), ತಂದೆ ಫಕ್ರುದ್ದೀನ್ ಎಂಬವರು ಹಲ್ಲೆಗೆ ಒಳಗಾದವರು.
ದಿನಾಂಕ 23/01/2026 ರಂದು ಸಂಜೆ ಸುಮಾರು 5 ಗಂಟೆಗೆ ಬಸ್ ನಿಲ್ದಾಣದಲ್ಲಿ ನಿಂತಿದ್ದ ವೇಳೆ, ಸೆಲೀನ ಬಸ್ (KA-20 AC-1097) ಚಾಲಕ ಸದ್ದಾಂ ಎಂಬಾತ ಬಸ್ ಟೈಮಿಂಗ್ ವಿಚಾರವಾಗಿ ರಿಯಾಜ್ ಅವರೊಂದಿಗೆ ಮಾತಿನ ಚಕಮಕಿ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.
ವಿವಾದ ತೀವ್ರಗೊಂಡು, ಸದ್ದಾಂ ಸ್ಕ್ರೂ ಡ್ರೈವರ್‌ನಿಂದ ರಿಯಾಜ್ ಅವರ ಎಡ ಕಣ್ಣಿನ ಮೇಲ್ಭಾಗಕ್ಕೆ ಚುಚ್ಚಿ ಹಲ್ಲೆ ನಡೆಸಿದ್ದಾನೆ. ಹಲ್ಲೆಯಿಂದ ತಪ್ಪಿಸಿಕೊಳ್ಳಲು ರಿಯಾಜ್ ಅಲ್ಲಿಂದ ತೆರಳಲು ಪ್ರಯತ್ನಿಸಿದಾಗ, ಆರೋಪಿಯು ಹಿಂಬಾಲಿಸಿಕೊಂಡು ಹೋಗಿ ಅಡ್ಡಗಟ್ಟಿ ಕೊಲ್ಲುವ ಉದ್ದೇಶದಿಂದ ಮತ್ತೆ ಸ್ಕ್ರೂ ಡ್ರೈವರ್‌ನಿಂದ ಚುಚ್ಚಿ ಮಾರಣಾಂತಿಕ ಹಲ್ಲೆ ನಡೆಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಇದಲ್ಲದೆ, “ಮಂಗಳೂರಿಗೆ ಬಾ, ನಿನ್ನನ್ನು ನೋಡಿಕೊಳ್ಳುತ್ತೇನೆ” ಎಂದು ಜೀವ ಬೆದರಿಕೆ ಹಾಕಿರುವುದಾಗಿ ಆರೋಪಿಸಲಾಗಿದೆ. ಗಾಯಗೊಂಡ ರಿಯಾಜ್ ಅವರನ್ನು ಚಿಕಿತ್ಸೆಗಾಗಿ ಉಡುಪಿ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 20/2026 ರ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 126(2), 118(1), 109, 352 ಹಾಗೂ 351(2) ಅನ್ವಯ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.