
ಡೈಲಿ ವಾರ್ತೆ:JAN/26/2026
ಗಂಗೊಳ್ಳಿ ಸ್ಟೆಲ್ಲಾ ಮಾರಿಸ್ ಸಮೂಹ ಸಂಸ್ಥೆಯಲ್ಲಿ 77ನೇ ಗಣರಾಜ್ಯೋತ್ಸವ ವೈಭವ

ಗಂಗೊಳ್ಳಿ: ಗಂಗೊಳ್ಳಿಯ ಸ್ಟೆಲ್ಲಾ ಮಾರಿಸ್ ಸಮೂಹ ಸಂಸ್ಥೆಯಲ್ಲಿ 77ನೇ ಗಣರಾಜ್ಯೋತ್ಸವವನ್ನು ಅತ್ಯಂತ ವೈಭವ ಹಾಗೂ ದೇಶಭಕ್ತಿಯ ವಾತಾವರಣದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದ ಗೌರವಾನ್ವಿತ ಮುಖ್ಯ ಅತಿಥಿಗಳಾಗಿದ್ದ ಮಾಜಿ ಸೈನಿಕ ಶ್ರೀಯುತ ಗಣಪತಿ ಖಾರ್ವಿ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಕಂಡ ಶಿಸ್ತುಬದ್ಧತೆ ಹಾಗೂ ದೇಶಭಕ್ತಿಯನ್ನು ಪ್ರಶಂಸಿಸಿದರು. ಭಾರತೀಯ ಪ್ರಜೆಗಳಾದ ಪ್ರತಿಯೊಬ್ಬರೂ ದೇಶದ ಮೇಲೆ ಪ್ರೀತಿ, ಅಭಿಮಾನ ಹಾಗೂ ಗೌರವ ಭಾವನೆ ಹೊಂದಿರಬೇಕು ಎಂದು ಅವರು ಕರೆ ನೀಡಿದರು.
ನಂತರ ಉಭಯ ಶಾಲೆಗಳ ವಿದ್ಯಾರ್ಥಿಗಳಿಂದ ದೇಶಪ್ರೇಮವನ್ನು ಪ್ರತಿಬಿಂಬಿಸುವ ಭಾಷಣಗಳು, ವಿವಿಧ ರೀತಿಯ ನೃತ್ಯ, ಸಂಗೀತ ಹಾಗೂ ಪ್ರಹಸನ ಕಾರ್ಯಕ್ರಮಗಳು ಪ್ರದರ್ಶಿಸಲ್ಪಟ್ಟು,
ಕಾರ್ಯಕ್ರಮಕ್ಕೆ ವಿಶೇಷ ಕಳೆ ತಂದವು.
ಕಾರ್ಯಕ್ರಮದ ಉಸ್ತುವಾರಿಯನ್ನು ಶಿಕ್ಷಕಿ ಶ್ರೀಮತಿ ವಿನಿತಾ ಡಿ. ಸೋಜಾ ಅವರು ವಹಿಸಿದ್ದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಉಭಯ ಶಾಲೆಗಳ ಜಂಟಿ ಕಾರ್ಯದರ್ಶಿ ಧರ್ಮ ಭಗಿನಿ ಕ್ರೆಸೆನ್ಸ್, ಕಾಮೆ೯ಲ್ ಸಂಸ್ಥೆಯ ಮುಖ್ಯಸ್ಥೆ ಧರ್ಮ ಭಗಿನಿ ಗ್ರೇಸಿ ಲೋಬೋ, ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಧರ್ಮ ಭಗಿನಿ ವಿಜಯಾ ಕ್ರಾಸ್ತ ಉಪಸ್ಥಿತರಿದ್ದರು.
ವೇದಿಕೆಯ ಮುಂಭಾಗದಲ್ಲಿ ತ್ರಿವಳಿ ಶಾಲೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದ್ದರು.
ವಿದ್ಯಾರ್ಥಿ ಜೋಹಾನ್ ಸ್ವಾಗತಿಸಿದರು, ಜಾನೀಸ್ ವಂದಿಸಿದರು, ಪ್ರೀಸ್ಟನ್ ಅವರು ಕಾರ್ಯಕ್ರಮ ನಿರೂಪಿಸಿದರು.