
ಡೈಲಿ ವಾರ್ತೆ:JAN/26/2026
ಕೋಟದಲ್ಲಿ ಗಣರಾಜ್ಯೋತ್ಸವ ಸಂಭ್ರಮ: ಯೋಧರೊಂದಿಗೆ ನಡಿಗೆ, ನಿವೃತ್ತ ವಾಯುಸೇನಾ ಯೋಧರಿಗೆ ಗೌರವ

ಕೋಟ, ಜ.26: ಗಣರಾಜ್ಯೋತ್ಸವದ ಅಂಗವಾಗಿ ಕೋಟತಟ್ಟು ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಡಾ. ಶಿವರಾಮ ಕಾರಂತ ಹುಟ್ಟೂರು ಪ್ರಶಸ್ತಿ ಪ್ರತಿಷ್ಠಾನ ಕೋಟ ಹಾಗೂ ಕರಾವಳಿ ನಿವೃತ್ತ ವಾಯುಸೇನಾ ಯೋಧರ ಸಂಘ (ಕಾವ್ಯ) ಆಶ್ರಯದಲ್ಲಿ ಸೋಮವಾರ ಕೋಟ ಕಾರಂತ ಕಲಾಭವನದಲ್ಲಿ ಯೋಧರೊಂದಿಗೆ ನಡಿಗೆ ಹಾಗೂ ನಿವೃತ್ತ ಯೋಧರಿಗೆ ಗೌರವ ಕಾರ್ಯಕ್ರಮ ಜರಗಿತು.
ಹುತಾತ್ಮ ಯೋಧ ಅನೂಪ್ ಪೂಜಾರಿಯವರ ಪತ್ನಿ ಮಂಜುಶ್ರೀ ಅವರು ಜಾಥಕ್ಕೆ ಚಾಲನೆ ನೀಡಿದರು.
ಈ ಸಂದರ್ಭ ನೂರಾರು ಸಂಖ್ಯೆಯ ನಿವೃತ್ತ ಯೋಧರು, ಸೇನಾ ತರಬೇತಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕೋಟ ಅಮೃತೇಶ್ವರೀ ದೇಗುಲದಿಂದ ಕಾರಂತ ಕಲಾಭವನದ ತನಕ ಯೋಧರೊಂದಿಗೆ ಜಾಥ ನಡೆಸಿದರು.
ಅನಂತರ ಇಲ್ಲಿನ ವಿಗ್–21 ಯುದ್ಧ ವಿಮಾನದ ಸಮೀಪ ಗಣರಾಜ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಲಾಯಿತು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ವಿಗ್–21 ಯುದ್ಧ ವಿಮಾನದಲ್ಲಿ ಸೇವೆ ಸಲ್ಲಿಸಿದ ವಾರಂಟ್ ಆಫೀಸರ್ ಶ್ರೀಧರ ಭಟ್ ಸೇರಿದಂತೆ ಹಿರಿಯ ಅಧಿಕಾರಿಗಳಾದ ವ್ಯಾಸರಾಜ್, ಮೋಹನ್ ದಾಸ್ ಶೆಟ್ಟಿ, ವಿಕ್ಟರ್, ಸುನಿಲ್ ಶೆಣೈ, ಶಿವಪ್ರಸಾದ್, ಸುಧಾಕರ ದೇವಾಡಿಗ, ಸುಭಾಶ್ ಶಾಸ್ತ್ರಿ, ಶ್ರೀನಿವಾಸ ಗಾಣಿಗ ಹಾಗೂ ಯಶವಂತ ಶೆಟ್ಟಿರವರನ್ನು ಗೌರವಿಸಲಾಯಿತು.
ಉದ್ಯಮಿ ಬಂಜಾರ ಡಾ. ಕೆ. ಪ್ರಕಾಶ್ ಶೆಟ್ಟಿ ಸನ್ಮಾನ ನೆರವೇರಿಸಿ ಶುಭ ಹಾರೈಸಿದರು.
ನಿವೃತ್ತ ಯೋಧರ ಪರವಾಗಿ ನಿವೃತ್ತ ಮೇಜರ್ ಜನರಲ್ ಎಂ.ವಿ. ಭಟ್, ರಮೇಶ್ ಕಾರ್ಣಿಕ್ ಹಾಗೂ ಅತುಲ್ ಕುಮಾರ್ ರಸ್ತೋದಿ ಅವರು ಮಾತನಾಡಿ, ದೇಶದ ರಕ್ಷಣೆಯಲ್ಲಿ ಯೋಧರ ಸೇವೆಯ ಮಹತ್ವವನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಕುಂದಾಪುರ ಉಪವಿಭಾಗಾಧಿಕಾರಿ ರಶ್ಮಿ, ಉದ್ಯಮಿಗಳಾದ ಸಂಪತ್ ಕುಮಾರ್ ಶೆಟ್ಟಿ, ಸುಗ್ಗಿ ಸುಧಾಕರ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರಂತ ಪ್ರತಿಷ್ಠಾನದ ಗೌರವಾಧ್ಯಕ್ಷ ಉದ್ಯಮಿ ಆನಂದ್ ಕುಂದರ್ ಸ್ವಾಗತಿಸಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಯೋಧ ಜಾರ್ಜೆಡ್ಡು ಶ್ರೀನಿವಾಸ ಗಾಣಿಗ ನಿವೃತ್ತ ಸೈನಿಕರ ಪರಿಚಯ ನೀಡಿದರು.
ವಿಜಯಭಟ್ ಕಡೆಕಾರು ವಂದೇ ಮಾತರಂ ಹಾಡಿದರು. ಪಿಡಿಓ ರವೀಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.