
ಡೈಲಿ ವಾರ್ತೆ:JAN/26/2026
ಕುಂದಾಪುರದಲ್ಲಿ ಮನೆ ಬೀಗ ಮುರಿದು ಕಳವು: ಚಿನ್ನ, ನಗದು ಸೇರಿ ₹95 ಸಾವಿರ ಮೌಲ್ಯದ ಸೊತ್ತು ನಾಪತ್ತೆ

ಕುಂದಾಪುರ: ಕುಂದಾಪುರ ತಾಲೂಕು ಕೋಣಿ ಗ್ರಾಮದ ಕಟ್ಕೇರಿ ಮೇಪು ಪ್ರದೇಶದಲ್ಲಿ ಮನೆ ಬೀಗ ಮುರಿದು ಕಳ್ಳತನ ನಡೆದಿರುವ ಘಟನೆ ವರದಿಯಾಗಿದೆ.
ದೂರುದಾರರಾದ ಕುಂದಾಪುರ ತಾಲೂಕಿನ ಕೋಣಿ ಗ್ರಾಮದ,ಮೇಪು ಕಟ್ಕೇರಿಯ ಆತಿಕಾ ಬಿ (63), ಗಂಡ ಇದ್ದಿನ್ ಸಾಹೇಬ್ ಇವರ ಮನೆಗೆ ಜ.23ರ ರಾತ್ರಿ 11 ಗಂಟೆಯಿಂದ ಜ.26ರ ಬೆಳಗಿನ ಜಾವ 1.30 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಮನೆಯ ಬಾಗಿಲಿನ ಬೀಗವನ್ನು ಮುರಿದು ಒಳ ಪ್ರವೇಶಿಸಿದ್ದಾರೆ ಎನ್ನಲಾಗಿದೆ.
ಮನೆಯೊಳಗಿನ ಕಪಾಟಿನಲ್ಲಿ ಇಡಲಾಗಿದ್ದ 3 ಗ್ರಾಂ ಚಿನ್ನದ ಉಂಗುರ (ಅಂದಾಜು ಮೌಲ್ಯ ₹15,000), 4 ಗ್ರಾಂ ಚಿನ್ನದ ಕಾಯಿನ್ (ಅಂದಾಜು ಮೌಲ್ಯ ₹40,000), ₹20,000 ಮೌಲ್ಯದ ವಾಚ್ ಹಾಗೂ ₹20,000 ನಗದು ಹಣ ಸೇರಿದಂತೆ ಒಟ್ಟು ಸುಮಾರು ₹95,000 ಮೌಲ್ಯದ ಚಿನ್ನಾಭರಣ, ವಾಚ್ ಹಾಗೂ ನಗದು ಹಣವನ್ನು ಕಳ್ಳರು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 06/2026 ಕಲಂ 331(3), 331(4) ಹಾಗೂ 305 BNS ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.