
ಡೈಲಿ ವಾರ್ತೆ:JAN/26/2026
ಸಾಸ್ತಾನ| ಗುರುಕುಲ ಮಾದರಿ ಶಿಕ್ಷಣ ಜಾರಿಗೆ ಅಗತ್ಯ – ಬೃಹತ್ ಹಿಂದೂ ಸಂಗಮದಲ್ಲಿ ಶ್ರೀ ಈಶ ವಿಠಲದಾಸ ಶ್ರೀಪಾದಂಗಳ

ಕೋಟ: ನಮ್ಮ ದೇಶದಲ್ಲಿ ಸಂಸ್ಕಾರಭರಿತ ಗುರುಕುಲ ಮಾದರಿಯ ಶಿಕ್ಷಣ ಪದ್ಧತಿಯನ್ನು ಮತ್ತೆ ಜಾರಿಗೆ ತರಬೇಕಾದ ಅಗತ್ಯವಿದೆ ಎಂದು ಕೇಮಾರಿನ ಸಾಂದೀಪನಿಸಾಧನಾಶ್ರಮದ ಶ್ರೀ ಶ್ರೀ ಈಶ ವಿಠಲದಾಸ ಶ್ರೀಪಾದಂಗಳ ಹೇಳಿದರು.

ಭಾನುವಾರ ಸಾಸ್ತಾನದ ಕಾರ್ತಿಕೇಯ ಎಸ್ಟೇಟ್‌ನಲ್ಲಿ ಹಿಂದೂ ಸಂಗಮ ಆಯೋಜನಾ ಸಮಿತಿ ಸಾಲಿಗ್ರಾಮ ತಾಲೂಕಿನ ಸಾಸ್ತಾನ ಮಂಡಲದ ಆಶ್ರಯದಲ್ಲಿ ನಡೆದ ಬೃಹತ್ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದ ಅವರು, ಗುಲಾಮಿ ಶಿಕ್ಷಣದ ಪರಿಣಾಮವಾಗಿ ಸಮಾಜ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಮುಂದಿನ ತಲೆಮಾರಿಗೆ ಸಂಸ್ಕಾರಯುತ ಶಿಕ್ಷಣ ನೀಡುವ ಹೊಣೆ ಪೋಷಕರ ಮೇಲಿದೆ ಎಂದರು. ಭಗವದ್ಗೀತೆ, ರಾಮಾಯಣ, ಮಹಾಭಾರತದಂತಹ ಕಾವ್ಯಗಳ ಅಧ್ಯಯನದಿಂದ ಧರ್ಮಜಾಗೃತಿ ನಿರಂತರವಾಗಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಪ್ರಾಂತ ಕಾರ್ಯವಾಹ ಪ್ರಕಾಶ್ ಎಸ್.ಪಿ ದಿಕ್ಸೂಚಿ ಭಾಷಣ ನೀಡಿ, ಸನಾತನ ಹಿಂದೂ ಧರ್ಮ ಜಾಗೃತಿ, ಕುಟುಂಬ ಪ್ರಬೋಧನ, ಸಂಸ್ಕೃತಿ ರಕ್ಷಣೆ ಹಾಗೂ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಬೇಕಿದೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ಹಿಂದೂ ಸಂಗಮ ಸಾಸ್ತಾನ ಮಂಡಲದ ಅಧ್ಯಕ್ಷ ರಘು ಪೂಜಾರಿ ವಹಿಸಿದ್ದರು.
ಕಚ್ಚೂರು ಮಾಲ್ತಿಯಮ್ಮ ದೇಗುಲದ ಟ್ರಸ್ಟಿ ವಾಸುದೇವ ಹಂಗಾರಕಟ್ಟೆ, ವೈದ್ಯೆ ಡಾ. ಉಷಾ ಹೇಮಂತ್, ಹಿಂದೂ ಸಂಗಮದ ಉಪಾಧ್ಯಕ್ಷ ಎಂ.ಸಿ. ಚಂದ್ರಶೇಖರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಈ ಸಂದರ್ಭ ಶಿವಕೃಪಾ ಕಲ್ಯಾಣಮಂಟಪದಿಂದ ಕಾರ್ತಿಕೇಯ ಎಸ್ಟೇಟ್ ವರೆಗೆ ಬೃಹತ್ ಹಿಂದೂ ಸಂಗಮ ಶೋಭಯಾತ್ರೆ ವೈಭವದಿಂದ ಜರಗಿತು. ಭಗವದ್ಗೀತೆ ಪಾರಾಯಣ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸಂಗೀತ ಸಂಜೆ ಜನಮನ ಸೆಳೆದವು.