
ಡೈಲಿ ವಾರ್ತೆ:ಜನವರಿ/28/2026
ಮುನಿಯಾಲ್ ಶ್ರೀಮನ್ನಾಗಮಂಡಲ ಪ್ರಚಾರ ಕಾರ್ಯಕ್ಕೆ ಚಾಲನೆ: ತಪಸ್ಸಿನ ಭೂಮಿ ಮುನಿಯಾಲಿನಲ್ಲಿ ಏಕಪವಿತ್ರ ಶ್ರೀಮನ್ನಾಗಮಂಡಲ: ಪ್ರಕೃತಿ, ಕೃಷಿ ಮತ್ತು ಆಧ್ಯಾತ್ಮದ ಸಂಗಮ -ಡಾ. ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ

ಮುನಿಯಾಲು: ಮುನಿಯಾಲು ಸಾದು–ಸಂತರ ತಪಸ್ಸಿನಿಂದ ಪುಣ್ಯಭೂಮಿಯಾಗಿ ಪ್ರಸಿದ್ಧವಾಗಿರುವ ಸ್ಥಳ. ಇಂತಹ ಪವಿತ್ರ ಭೂಮಿಯಲ್ಲಿ ರಾಮಕೃಷ್ಣ ಆಚಾರ್ ಅವರು ಏಕಪವಿತ್ರ ಶ್ರೀಮನ್ನಾಗಮಂಡಲವನ್ನು ಹಮ್ಮಿಕೊಂಡಿರುವುದು ಅತ್ಯಂತ ಶ್ಲಾಘನೀಯ ಕಾರ್ಯ ಎಂದು ಮೂಡುಬಿದಿರೆ ಜೈನಮಠದ ಡಾ. ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.
ಅವರು ಮುನಿಯಾಲು ಸಂಜೀವಿನಿ ಫಾರ್ಮ್ ಗೋದಾಮಿನಲ್ಲಿ ನಡೆಯಲಿರುವ ಏಕಪವಿತ್ರ ಶ್ರೀಮನ್ನಾಗಮಂಡಲದ ಪೂರ್ವಭಾವಿಯಾಗಿ ನಡೆದ ಸಮಾಲೋಚನಾ ಸಭೆ, ಕಚೇರಿ ಉದ್ಘಾಟನೆ ಹಾಗೂ ಆಹ್ವಾನ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ನಾಗನ ಆರಾಧನೆ ಅನಂತ ಕಾಲದಿಂದ ನಡೆದು ಬಂದಿದ್ದು, ಸಂತಾನಪ್ರಾಪ್ತಿ, ಸಂಸಾರಿಕ ಸುಖ, ಶಾಂತಿ ಹಾಗೂ ನೆಮ್ಮದಿ ನಾಗನ ಸೇವೆಯಿಂದ ಲಭಿಸುತ್ತದೆ. ನಾಗಾರಾಧನೆಯಿಂದ ಚರ್ಮರೋಗ ನಿವಾರಣೆಯಾಗುವುದರೊಂದಿಗೆ ಸಾಂಸಾರಿಕ ಹಾಗೂ ಕೌಟುಂಬಿಕ ಮನಸ್ತಾಪಗಳು ದೂರವಾಗುತ್ತವೆ ಎಂದು ಸ್ವಾಮೀಜಿ ತಿಳಿಸಿದರು.
ರಾಮಕೃಷ್ಣ ಆಚಾರ್ ಅವರು “ಪ್ರಕೃತಿಯಿಂದ ಪ್ರಕೃತಿಗೆ” ಎಂಬ ವಿಶಿಷ್ಟ ಪರಿಕಲ್ಪನೆಯೊಂದಿಗೆ ನಾಗಮಂಡಲವನ್ನು ಹಮ್ಮಿಕೊಂಡಿದ್ದು, ಆಧುನಿಕತೆ, ವಿಜ್ಞಾನ, ಕೃಷಿ, ಪ್ರಕೃತಿ ಮತ್ತು ಆಧ್ಯಾತ್ಮದ ಸಮನ್ವಯದೊಂದಿಗೆ ಇಡೀ ಜಿಲ್ಲೆಗೆ ಮಾದರಿಯಾಗುವ ರೀತಿಯಲ್ಲಿ ಅತ್ಯಂತ ಶ್ರದ್ಧೆಯಿಂದ ಸಿದ್ಧತೆ ನಡೆಸುತ್ತಿದ್ದಾರೆ. ಈ ಪವಿತ್ರ ನಾಗಮಂಡಲ ಯಶಸ್ವಿಯಾಗಿ ನೆರವೇರಲಿ ಎಂದು ಅವರು ಆಶೀರ್ವದಿಸಿದರು.
ಕಾರ್ಕಳ ಶಾಸಕ ಸುನಿಲ್ ಕುಮಾರ್ ಮಾತನಾಡಿ, ರಾಮಕೃಷ್ಣ ಆಚಾರ್ ಅವರು ಉದ್ಯಮದಲ್ಲಿ ಯಶಸ್ಸು ಕಂಡು ನೆಮ್ಮದಿಗಾಗಿ ಸಾವಯವ ಹಾಗೂ ಗೋಆಧಾರಿತ ಕೃಷಿಯನ್ನು ಅಳವಡಿಸಿಕೊಂಡಿದ್ದಾರೆ. ಗೋದಾಮಿನ ಮೂಲಕ ಹತ್ತಾರು ಸಾಮಾಜಿಕ ಹಾಗೂ ಕೃಷಿ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ರೈತರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ನಾಗಮಂಡಲದಲ್ಲಿ ರೈತ ಪೀಠ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ದೊಂದಿ ಬೆಳಕಿನಲ್ಲಿ ನಡೆಯುವ ಈ ನಾಗಮಂಡಲಕ್ಕೆ ಸ್ಥಳೀಯರು ಸೇರಿದಂತೆ ಎಲ್ಲರೂ ಬೆಂಬಲ ನೀಡಬೇಕು ಎಂದು ಹೇಳಿದರು.
ಸಂಜೀವಿನಿ ಫಾರ್ಮ್ ಗೋದಾಮಿನ ಸಂಸ್ಥಾಪಕ ಡಾ. ಜಿ. ರಾಮಕೃಷ್ಣ ಆಚಾರ್ ಮಾತನಾಡಿ, ಇಂದಿನ ದಿನಗಳಲ್ಲಿ ಮಾನವ ಸೈಟು, ಪ್ಲಾಟ್, ವ್ಯವಹಾರಗಳ ಹಿಂದೆ ಹೋಗಿ ಪ್ರಕೃತಿಯನ್ನು ಹಾಳು ಮಾಡಿದ್ದಾನೆ. ಮುಂದಿನ ದಿನಗಳಲ್ಲಿ ಅದು ಶಾಪವಾಗಿ ಪರಿಣಮಿಸಲಿದೆ. ಪ್ರಕೃತಿಯೇ ದೇವರು ಎಂಬ ಸತ್ಯವನ್ನು ನಾವು ಮರೆಯಬಾರದು. ನಮ್ಮ ಮಕ್ಕಳಿಗೆ ಪ್ರಕೃತಿಯನ್ನು ಬೆಳೆಸುವ ಹಾಗೂ ಆರಾಧಿಸುವ ಸಂಸ್ಕಾರವನ್ನು ನೀಡಬೇಕು. ಗೋಆಧಾರಿತ ಕೃಷಿಯ ಮಹತ್ವವನ್ನು ತಿಳಿಸಬೇಕು. ಮನುಷ್ಯರ ಜೀವನಶೈಲಿ ಹಾಳಾಗಿದ್ದು ಅದನ್ನು ಸರಿಪಡಿಸಿಕೊಳ್ಳುವ ಅಗತ್ಯವಿದೆ ಎಂದರು.
ಪ್ರಕೃತಿಯ ಆರಾಧನೆಯ ಭಾಗವಾಗಿ ಕೊರಂಗ್ರಪಾಡಿಯ ವಿದ್ವಾನ್ ಕೆ.ಪಿ. ಕುಮಾರಗುರು ತಂತ್ರಿಗಳ ಮಾರ್ಗದರ್ಶನದಲ್ಲಿ ಏಕಪವಿತ್ರ ನಾಗಮಂಡಲವನ್ನು ಹಮ್ಮಿಕೊಳ್ಳಲಾಗಿದ್ದು, ಇದಕ್ಕೆ ಎಲ್ಲರೂ ಬೆಂಬಲ ನೀಡಿ ಪ್ರೋತ್ಸಾಹಿಸುವಂತೆ ಅವರು ಮನವಿ ಮಾಡಿದರು.
ವೇದಿಕೆಯಲ್ಲಿ ಸವಿತಾ ರಾಮಕೃಷ್ಣ ಆಚಾರ್, ಕಡ್ತಲ ಗ್ರಾಮ ಪಂಚಾಯತ್ ಅಧ್ಯಕ್ಷ ಸುಕೇಶ್ ಶೆಟ್ಟಿ, ವರಂಗ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಅಮೀನ್ ಉಪಸ್ಥಿತರಿದ್ದರು.
ನಾಗಮಂಡಲೋತ್ಸವ ಸಮಿತಿ ಅಧ್ಯಕ್ಷ ಸಾಣೂರುಗುತ್ತು ದೇವಿ ಪ್ರಸಾದ್ ಶೆಟ್ಟಿ ಉಪ ಸಮಿತಿಗಳ ವಿವರ ನೀಡುತ್ತಾ ವಂದಿಸಿದರು. ಶ್ರೀಕಾಂತ್ ಶೆಟ್ಟಿ ಸ್ವಾಗತಿಸಿ, ಪುರೋಹಿತ್ ದಾಮೋದರ ಶರ್ಮಾ ಕಾರ್ಯಕ್ರಮ ನಿರೂಪಿಸಿದರು.