ಡೈಲಿ ವಾರ್ತೆ:ಜನವರಿ/28/2026

ಕುಮಟಾ ದೇವರ ಹಕ್ಕಲದಲ್ಲಿ ಬೆಂಕಿ ಕೃತ್ಯ: ಜಾತ್ರೆಗೆ ತೆರಳಿದ್ದ ಕುಟುಂಬದ ಮನೆಗೆ ಯುವಕ ಬೆಂಕಿ ಹಚ್ಚಲು ಯತ್ನ

ಕಾರವಾರ, ಜ.28: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ದೇವರ ಹಕ್ಕಲದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ.

ಕುಟುಂಬದವರು ಜಾತ್ರೆಗೆ ತೆರಳಿದ್ದ ಸಂದರ್ಭವನ್ನು ದುರುಪಯೋಗಪಡಿಸಿಕೊಂಡ ಯುವಕನೊಬ್ಬ ಮನೆಗೆ ಬೆಂಕಿ ಹಚ್ಚಲು ಯತ್ನಿಸಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಕುಮಟಾದ ವೆಂಕಟರಮಣ ಜಾತ್ರೆಗೆ ದಿನಕರ್ ಕುಟುಂಬದವರು ತೆರಳಿದ್ದ ವೇಳೆ, 18 ವರ್ಷದ ಫೈಸಾನ್ ಜಾಫರ್ ಶೇಖ್ ಎಂಬ ಯುವಕ ದಿನಕರ್ ಅವರ ಮನೆಗೆ ಬೆಂಕಿ ಹಚ್ಚಿದ್ದಾನೆ ಎನ್ನಲಾಗಿದೆ. ಬೆಂಕಿ ಹಚ್ಚಿದ ತಕ್ಷಣವೇ ಸ್ಥಳೀಯರ ಸಮಯಪ್ರಜ್ಞೆಯಿಂದ ಆರೋಪಿಯನ್ನು ಹಿಡಿದುಕೊಳ್ಳಲಾಗಿದ್ದು, ಹೆಚ್ಚಿನ ಅನಾಹುತ ತಪ್ಪಿದೆ.

ಘಟನೆಯಿಂದ ದೇವರ ಹಕ್ಕಲ ಪ್ರದೇಶದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶಾಂತಿ ಕಾಪಾಡುವ ನಿಟ್ಟಿನಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಲಾಗಿದ್ದು, ಈ ಸಂಬಂಧ ಯಾವ ಯಾವ ಕಲಂ ಅಡಿ ಪ್ರಕರಣ ದಾಖಲಿಸಲಾಗುತ್ತದೆ ಎಂಬ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಪ್ರಕರಣದ ಕುರಿತು ಪೊಲೀಸ್ ತನಿಖೆ ಮುಂದುವರಿದಿದೆ.