ಡೈಲಿ ವಾರ್ತೆ:ಜನವರಿ/29/2026

ಸಾಮರ್ ಇಂಟರ್ ನ್ಯಾಷನಲ್ ಇಸ್ಲಾಮಿಕ್ ಸ್ಕೂಲ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ: ಮಾನ್ಯತೆ ರದ್ದು, ಶಾಲೆ ಮುಚ್ಚಲು ಆದೇಶ

ಬೆಂಗಳೂರು: ಸಾಮರ್ ಇಂಟರ್ ನ್ಯಾಷನಲ್ ಇಸ್ಲಾಮಿಕ್ ಸ್ಕೂಲ್‌ನ ಮಾನ್ಯತೆಯನ್ನು ಶಾಲಾ ಶಿಕ್ಷಣ ಇಲಾಖೆ ರದ್ದುಪಡಿಸಿದ್ದು, ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 1130 ವಿದ್ಯಾರ್ಥಿಗಳಿಗೆ ಏಳು ದಿನಗಳೊಳಗೆ ಪರ್ಯಾಯ ಶಿಕ್ಷಣ ವ್ಯವಸ್ಥೆ ಕಲ್ಪಿಸಬೇಕೆಂದು ಆದೇಶಿಸಿದೆ. ಜೊತೆಗೆ ಶಾಲೆ ಮುಚ್ಚುವ ಪ್ರಕ್ರಿಯೆ ಜಾರಿಗೆ ತರಲು ಕ್ಷೇತ್ರ ಸಮನ್ವಯಾಧಿಕಾರಿ ನೇತೃತ್ವದ ನಾಲ್ವರ ಸಮಿತಿಯನ್ನು ರಚಿಸಲಾಗಿದೆ.

ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಪರವಾಗಿ ಕಾರ್ಯನಿರ್ವಹಿಸುತ್ತಿರುವ ಮುಖ್ಯ ಆಡಳಿತಾಧಿಕಾರಿ ಖಾಲಿದ್ ಮುಷರಫ್ ಬಿನ್ ಅಬ್ದುಲ್ ಜಲೀಲ್ ವಿರುದ್ಧ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ (FIR) ದಾಖಲಾಗಿದೆ.

ಬೆಂಗಳೂರು ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳು ನೀಡಿದ ದೂರಿನ ಆಧಾರದ ಮೇಲೆ ಐಪಿಸಿ ಸೆಕ್ಷನ್ 318(4), 336 ಮತ್ತು 340ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಬಂದೋಬಸ್ತ್ ಒದಗಿಸಿದೆ.

ಥಣಿಸಂದ್ರದಲ್ಲಿರುವ ಈ ಶಾಲೆಯ ಆಡಳಿತ ಮಂಡಳಿಯು ಮಾನ್ಯತೆ ರದ್ದುಪಡಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಜನವರಿ 19ರಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ತಿರಸ್ಕರಿಸಿದ್ದರು. ತನಿಖೆಯ ವೇಳೆ ಶಾಲೆಯು ವಿವಿಧ ಹೆಸರಿನಲ್ಲಿ ದಾಖಲೆ ಸಲ್ಲಿಸಿ ನೋಂದಣಿ ಹಾಗೂ ಮಾನ್ಯತೆ ನವೀಕರಣ ಪಡೆದಿರುವುದು, ಜೊತೆಗೆ ವಿಭಿನ್ನ ಹೆಸರುಗಳಲ್ಲಿ ಶಾಲಾ ಶುಲ್ಕ ವಸೂಲಿ ಮಾಡಿ ರಸೀದಿ ನೀಡಿರುವುದು ದಾಖಲೆಗಳಿಂದ ಸಾಬೀತಾಗಿದೆ.

ಕರ್ನಾಟಕ ಶಿಕ್ಷಣ ಕಾಯ್ದೆ–1983ರ ಸೆಕ್ಷನ್ 30, 31, 36 ಮತ್ತು 39ರ ನಿಯಮಗಳನ್ನು ಉಲ್ಲಂಘಿಸಿರುವುದಲ್ಲದೆ, ಸುಳ್ಳು ದಾಖಲೆಗಳ ಮೂಲಕ ಮಾನ್ಯತೆ ಪಡೆದಿರುವುದು ಗಂಭೀರ ಅಪರಾಧವೆಂದು ಆಯುಕ್ತರು ತಮ್ಮ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ಶಾಲೆಯ ಹೆಸರು ಬದಲಾವಣೆ ಮಾಡಿಕೊಂಡಿದ್ದರೂ ನಾಮಫಲಕದಲ್ಲಿ ತಪ್ಪು ಹೆಸರು ಪ್ರದರ್ಶಿಸಿ ಪೋಷಕರು ಹಾಗೂ ಸಾರ್ವಜನಿಕರನ್ನು ಗೊಂದಲಕ್ಕೆ ದೂಡಿರುವುದು ಕೂಡ ಪ್ರಮುಖ ಲೋಪವಾಗಿದೆ.

ಮಾನ್ಯತೆ ಹಿಂಪಡೆದು ನೋಂದಣಿ ರದ್ದುಪಡಿಸಿರುವ ಹಿನ್ನೆಲೆಯಲ್ಲಿ ಶಾಲೆಯ ಶೈಕ್ಷಣಿಕ ದಾಖಲೆಗಳನ್ನು ಹತ್ತಿರದ ಸರ್ಕಾರಿ ಪ್ರೌಢ ಶಾಲೆಗೆ ಹಸ್ತಾಂತರಿಸಲಾಗುವುದು.

ವಿದ್ಯಾರ್ಥಿಗಳನ್ನು ಸಮೀಪದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ದಾಖಲಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಇದೇ ವೇಳೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಪಡೆದ ಐದು ಲಕ್ಷ ರೂ. ಅನುದಾನವನ್ನು ಮದರಸಾ ಉದ್ದೇಶಕ್ಕೆ ಬಳಕೆ ಮಾಡಿರುವ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸಂಬಂಧಪಟ್ಟ ಇಲಾಖೆಗೆ ಸೂಚನೆ ನೀಡಲಾಗಿದೆ.