
ಡೈಲಿ ವಾರ್ತೆ:ಜನವರಿ/29/2026
ಕುಂದಾಪುರದ ಅಂತಾರಾಷ್ಟ್ರೀಯ ಪವರ್ ಲಿಫ್ಟರ್ ಡಾ. ಸತೀಶ್ ಖಾರ್ವಿಗೆ IFEE ಜೀವನ ಸಾಧನೆ ಪ್ರಶಸ್ತಿ

ಕುಂದಾಪುರ: ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಮತ್ತು ಶ್ರೇಷ್ಠತೆ ಪ್ರಶಸ್ತಿಗಳು (IFEE Awards)–2026 ಸಮಾರಂಭದಲ್ಲಿ, ಕುಂದಾಪುರದ ಅಂತಾರಾಷ್ಟ್ರೀಯ ಖ್ಯಾತಿಯ ಪವರ್ ಲಿಫ್ಟರ್ ಡಾ. ಸತೀಶ್ ಖಾರ್ವಿ ಅವರಿಗೆ ಜೀವನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಪವರ್ ಲಿಫ್ಟಿಂಗ್ ಕ್ಷೇತ್ರದಲ್ಲಿ ಡಾ. ಸತೀಶ್ ಖಾರ್ವಿ ಸಾಧಿಸಿರುವ ವಿಶಿಷ್ಟ ಸಾಧನೆಗಳನ್ನು ಗುರುತಿಸಿ, ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಕ್ರೀಡಾ ಕ್ಷೇತ್ರದಲ್ಲಿ ಅವರ ದೀರ್ಘಕಾಲದ ಸಮರ್ಪಣೆ, ಶಿಸ್ತು ಮತ್ತು ಸಾಧನೆಯೇ ಈ ಗೌರವಕ್ಕೆ ಕಾರಣವಾಗಿದೆ.
ಪ್ರಶಸ್ತಿ ಪ್ರದಾನ ಸಮಾರಂಭವು ಜನವರಿ 27, 2026ರಂದು ಬೆಂಗಳೂರು ನಗರದ ಕಲಾಗ್ರಾಮ ಸಂಸ್ಕೃತಿಕ ಭವನ, ಮಲ್ಲತಹಳ್ಳಿ – ನಾಗರಭಾವಿಯಲ್ಲಿ ವಿಜೃಂಭಣೆಯಿಂದ ನಡೆಯಿತು. ವಿವಿಧ ಕ್ಷೇತ್ರಗಳ ಗಣ್ಯರು, ಕಲಾವಿದರು ಮತ್ತು ಕ್ರೀಡಾಪಟುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಗೌರವ ಸ್ವೀಕರಿಸಿ ಮಾತನಾಡಿದ ಡಾ. ಸತೀಶ್ ಖಾರ್ವಿ, “ಇದು ನನ್ನ ಜೀವನದ ಅತ್ಯಂತ ಅಮೂಲ್ಯ ಕ್ಷಣ. ನನ್ನ ಕ್ರೀಡಾ ಸಾಧನೆಯನ್ನು ಗುರುತಿಸಿ ಜೀವನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದ IFEE Awards ಸಂಸ್ಥೆಗೆ ಹಾಗೂ ಈ ಗೌರವಕ್ಕೆ ಕಾರಣರಾದ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು,” ಎಂದು ಹೇಳಿದರು.
ಕುಂದಾಪುರ ತಾಲೂಕಿನ ಕ್ರೀಡಾಭಿಮಾನಿಗಳಲ್ಲಿ ಹಾಗೂ ಪವರ್ ಲಿಫ್ಟಿಂಗ್ ವಲಯದಲ್ಲಿ ಈ ಪ್ರಶಸ್ತಿ ಹೆಮ್ಮೆಯ ವಿಷಯವಾಗಿದ್ದು, ಯುವ ಕ್ರೀಡಾಪಟುಗಳಿಗೆ ಡಾ. ಸತೀಶ್ ಖಾರ್ವಿ ಪ್ರೇರಣೆಯಾಗಿದ್ದಾರೆ.