

ಡೈಲಿ ವಾರ್ತೆ: ಫೆ./19//2026

ಹೊಳೆಗದ್ದೆ ಟೋಲ್ ಗೇಟ್‌ನಲ್ಲಿ ಕನ್ನಡಕ್ಕೆ ಅವಮಾನ ಆರೋಪ: ಸಿಬ್ಬಂದಿ ವಜಾಗೊಳಿಸದಿದ್ದರೆ ಉಗ್ರ ಹೋರಾಟ – ಕರವೇ ಜನಧ್ವನಿ ಎಚ್ಚರಿಕೆ

ಕುಮಟಾ, ಫೆ.19: ತಾಲೂಕಿನ ಹೊಳೆಗದ್ದೆ ಟೋಲ್ ಗೇಟ್‌ನಲ್ಲಿ ಕನ್ನಡ ಭಾಷೆಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಕರವೇ ಜನಧ್ವನಿ ಸಂಘಟನೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಸಂಘಟನೆಯ ಜಿಲ್ಲಾಧ್ಯಕ್ಷ ಉಮಾಕಾಂತ ಹೊಸ್ಕಟ್ಟಾ ಎಚ್ಚರಿಸಿದ್ದಾರೆ.
ಮಂಗಳವಾರ ಹೊಳೆಗದ್ದೆ ಟೋಲ್ ಗೇಟ್‌ನಲ್ಲಿ ಸ್ಥಳೀಯ ವಾಹನಗಳಿಗೂ ಸುಂಕ ವಿಧಿಸಲಾಗುತ್ತಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಕರವೇ ಜನಧ್ವನಿ ಕಾರ್ಯಕರ್ತರು ಸುಂಕ ವಸೂಲಾತಿ ಕೇಂದ್ರಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿದರು. ಈ ವೇಳೆ ಅಲ್ಲಿದ್ದ ಸಿಬ್ಬಂದಿ, “ಮೇಲಾಧಿಕಾರಿಗಳಿಗೆ ಕನ್ನಡ ಬರುವುದಿಲ್ಲ. ನೀವು ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಮಾತನಾಡಿದರೆ ಸಂಪರ್ಕ ಕಲ್ಪಿಸುತ್ತೇನೆ” ಎಂದು ಉತ್ತರಿಸಿದ್ದಾನೆ ಎನ್ನಲಾಗಿದೆ. ಅಲ್ಲದೆ, ಹಿಂದಿಯಲ್ಲಿ ಮಾತನಾಡುವಂತೆ ವ್ಯಂಗ್ಯ ಮಾಡಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ.
ಈ ಸಂದರ್ಭದಲ್ಲಿ ಕಾರ್ಯಕರ್ತರು ತಮ್ಮ ಮಾತುಗಳನ್ನು ಭಾಷಾಂತರಿಸಿ ತಿಳಿಸಲು ಕೇಳಿಕೊಂಡರೂ, ಸಿಬ್ಬಂದಿ ಜಯಂತ್ ಅಸಮರ್ಪಕವಾಗಿ ವರ್ತಿಸಿ ಕನ್ನಡ ನಾಡು-ನುಡಿಗೆ ಅವಮಾನ ಮಾಡಿದ್ದಾನೆ ಎಂದು ಸಂಘಟನೆ ದೂರಿದೆ.
ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತಂದಿರುವುದಾಗಿ ಆರೋಪಿಸಿದ ಸಂಘಟನೆ, ಸಂಬಂಧಿತ ಸಿಬ್ಬಂದಿಯನ್ನು ತಕ್ಷಣವೇ ಕೆಲಸದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದೆ.
ಸುಂಕ ವಸೂಲಾತಿ ಕುರಿತ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಸಿಗದ ಹಿನ್ನೆಲೆಯಲ್ಲಿ, ಶುಕ್ರವಾರ ಮತ್ತೆ ಕಚೇರಿಯನ್ನು ಸಂಪರ್ಕಿಸಿ ಮೇಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಜಿಲ್ಲಾಧ್ಯಕ್ಷ ಉಮಾಕಾಂತ ಹೊಸ್ಕಟ್ಟಾ ತಿಳಿಸಿದ್ದಾರೆ. ಬೇಡಿಕೆ ಈಡೇರದಿದ್ದಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಹೊನ್ನಾವರ ತಾಲೂಕಾಧ್ಯಕ್ಷ ಗಣೇಶ್ ನಾಯ್ಕ್ ಸೇರಿದಂತೆ ಕಾರ್ಯಕರ್ತರಾದ ರಾಜೇಶ್ ನಾಯ್ಕ್, ಆದರ್ಶ ನಾಯ್ಕ್, ನವೀನ್ ನಾಯ್ಕ್, ಹರ್ಷಿತ್ ನಾಯ್ಕ್, ಶ್ರೀನಿವಾಸ ನಾಯ್ಕ್, ಶರತ್ ಗೌಡ ಹಾಗೂ ಇತರರು ಉಪಸ್ಥಿತರಿದ್ದರು.