ಡೈಲಿ ವಾರ್ತೆ: ಫೆ./21/2026

ಉಡುಪಿ ನಗರಸಭೆ ಆಸ್ತಿ ತೆರಿಗೆ ಹಗರಣ: ತೆರಿಗೆ ಸಲಹೆಗಾರ್ತಿ ಸೇರಿ ಇಬ್ಬರ ಬಂಧನ

ಉಡುಪಿ: ಉಡುಪಿ ನಗರಸಭೆಯ ಆಸ್ತಿ ತೆರಿಗೆ ಹಣವನ್ನು ದುರ್ಬಳಕೆ ಮಾಡಿ ಸರ್ಕಾರಕ್ಕೆ ವಂಚನೆ ಮಾಡಿರುವ ಗಂಭೀರ ಆರೋಪಕ್ಕೆ ಸಂಬಂಧಿಸಿ ಮಹಿಳೆ ಸೇರಿದಂತೆ ಇಬ್ಬರನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಬನ್ನಂಜೆ ನಿವಾಸಿ ಹಾಗೂ ನಗರಸಭೆ ಹೊರಗಡೆ ತೆರಿಗೆ ಸಲಹೆಗಾರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಶಾಲಿನಿ ಸೇರಿಗಾರ್ ಮತ್ತು ಕುಕ್ಕಿಕಟ್ಟೆ ಸಚ್ಚಿದಾನಂದ ಲೇಔಟ್ ನಿವಾಸಿ, ಬ್ಯಾಂಕ್ ಸಿಬ್ಬಂದಿ ಗಣೇಶ್ ಎಂದು ಗುರುತಿಸಲಾಗಿದೆ.

ಕಲ್ಮಾಡಿ ನಿವಾಸಿ ಆನಂದ ಸುವರ್ಣ ಅವರು ತಮ್ಮ ಕಟ್ಟಡಕ್ಕೆ ಸಂಬಂಧಿಸಿದಂತೆ 2025ರ ಅಕ್ಟೋಬರ್ 16ರಂದು 12 ವರ್ಷಗಳ ಆಸ್ತಿ ತೆರಿಗೆ ಮೊತ್ತವಾಗಿ ಒಟ್ಟು 34,730 ರೂ. ಹಣವನ್ನು ನಗರಸಭೆ ಕಚೇರಿ ಹೊರಗಡೆ ಕೆಲಸ ಮಾಡುತ್ತಿದ್ದ ಶಾಲಿನಿ ಅವರಿಗೆ ನೀಡಿದ್ದರು. ಆಕೆ ತೆರಿಗೆ ಸ್ವೀಕರಿಸಿರುವ ಬಗ್ಗೆ ರಸೀದಿ ನೀಡಿದ್ದಳು.
ಆದರೆ ಇತ್ತೀಚೆಗೆ ಆನಂದ ಸುವರ್ಣ ಅವರು ನಗರಸಭೆಯ ಆಸ್ತಿ ತೆರಿಗೆ ಪೋರ್ಟಲ್‌ನಲ್ಲಿ ಪರಿಶೀಲನೆ ನಡೆಸಿದಾಗ, ಹಣ ಪಾವತಿಯಾಗದೇ ಬಾಕಿ ಇರುವುದಾಗಿ ತಿಳಿದುಬಂದಿದೆ. ಈ ವಿಚಾರವನ್ನು ಅವರು ಪೌರಾಯುಕ್ತರ ಗಮನಕ್ಕೆ ತಂದಾಗ, ಪರಿಶೀಲನೆಯಲ್ಲಿಯೂ ತೆರಿಗೆ ಮೊತ್ತ ಸರ್ಕಾರದ ಖಾತೆಗೆ ಜಮಾ ಆಗದೇ ಇರುವುದು ದೃಢಪಟ್ಟಿದೆ.

ನಂತರ ಶಾಲಿನಿಯನ್ನು ವಿಚಾರಣೆಗೊಳಪಡಿಸಿದಾಗ, ಆಕೆ ತಪ್ಪು ಒಪ್ಪಿಕೊಂಡಿದ್ದು, 2026ರ ಫೆಬ್ರವರಿ 16ರಂದು ಆನಂದ ಸುವರ್ಣರ ಹೆಸರಿನಲ್ಲಿ ಹೊಸ ಚಲನ್ ಸೃಷ್ಟಿಸಿ ಒಟ್ಟು 35,213 ರೂ. ಪಾವತಿಸಿದ್ದಳು. ಆದರೆ ಪ್ರಾಥಮಿಕ ತನಿಖೆಯಲ್ಲಿ ಶಾಲಿನಿ ಆನಂದ ಸುವರ್ಣ ನೀಡಿದ ಮೂಲ ತೆರಿಗೆ ಮೊತ್ತವನ್ನು ಸರ್ಕಾರಕ್ಕೆ ಜಮಾ ಮಾಡದೇ, ಚಲನ್ ಮೇಲೆ ಯೂನಿಯನ್ ಬ್ಯಾಂಕ್‌ನ ಮೊಹರು ಹಾಕಿ ದುರ್ಬಳಕೆ ಮಾಡಿರುವುದು ಬೆಳಕಿಗೆ ಬಂದಿದೆ.

ಈ ಕೃತ್ಯದಲ್ಲಿ ಇನ್ನಿತರರ ಸಹಭಾಗಿತ್ವವೂ ಇರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಪ್ರಕರಣವನ್ನು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ. ಸರ್ಕಾರಿ ಖಜಾನೆಗೆ ನೇರ ವಂಚನೆ ಎಸಗಿದ ಗಂಭೀರ ಪ್ರಕರಣವಾಗಿರುವುದರಿಂದ ಪೊಲೀಸರು ಸಮಗ್ರ ತನಿಖೆ ಕೈಗೊಂಡಿದ್ದಾರೆ.