

ಡೈಲಿ ವಾರ್ತೆ: ಫೆ./22/2026

ಉಳ್ಳಾಲ: ಲೂಡೊ ಆಟದ ಪ್ಲಾಸ್ಟಿಕ್ ಕಾಯಿನ್ ನುಂಗಿ ಎಂಟು ವರ್ಷದ ಬಾಲಕಿ ದುರ್ಮರಣ

ಉಳ್ಳಾಲ, ಫೆ.21: ಮನೆಯಲ್ಲಿ ಸಹೋದರ–ಸಹೋದರಿಯೊಂದಿಗೆ ಲೂಡೊ ಆಟದಲ್ಲಿ ತೊಡಗಿದ್ದ ಎಂಟು ವರ್ಷದ ಹೆಣ್ಣುಮಗುವೊಂದು ಆಟದಲ್ಲಿ ಬಳಸುವ ಶಂಕು ಆಕಾರದ ಪ್ಲಾಸ್ಟಿಕ್ ಕಾಯಿನ್ ನುಂಗಿ ಉಸಿರುಗಟ್ಟಿ ಮೃತಪಟ್ಟ ದುರ್ಘಟನೆ ತೊಕ್ಕೊಟ್ಟು ಸಮೀಪದ ಕೊಲ್ಯದಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.
ಮೃತ ಬಾಲಕಿಯನ್ನು ಮೂಲತಃ ಕಾಸರಗೋಡು ಜಿಲ್ಲೆಯ ಮಧೂರು ಉಳಿಯತಡ್ಕ ನಿವಾಸಿಗಳಾದ ರಾಜೇಶ್ ಗಟ್ಟಿ – ರಾಜೇಶ್ವರಿ ದಂಪತಿಯ ಪುತ್ರಿ ತನುಷ್ಕ (8) ಎಂದು ಗುರುತಿಸಲಾಗಿದೆ.
ತನುಷ್ಕ ಅವರ ತಾಯಿ ಉಳ್ಳಾಲದ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದು, ಉದ್ಯೋಗದ ನಿಮಿತ್ತ ಕುಟುಂಬ ಸಮೇತ ಕೊಲ್ಯದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಸಂಜೆ ವೇಳೆ ಮನೆಯಲ್ಲಿ ಸಹೋದರ ಹಾಗೂ ಸಹೋದರಿಯೊಂದಿಗೆ ಲೂಡೊ ಆಟವಾಡುತ್ತಿದ್ದ ತನುಷ್ಕ, ಆಟದ ವೇಳೆ ಪ್ಲಾಸ್ಟಿಕ್ ಕಾಯಿನ್ ಅನ್ನು ಬಾಯಿಗೆ ಹಾಕಿಕೊಂಡಿದ್ದು, ಆ ವೇಳೆ ಆಕಸ್ಮಿಕವಾಗಿ ಅದನ್ನು ನುಂಗಿದ್ದಾಳೆ ಎನ್ನಲಾಗಿದೆ. ಕಾಯಿನ್ ಗಂಟಲಿನಲ್ಲಿ ಸಿಲುಕಿಕೊಂಡ ಪರಿಣಾಮ ಏಕಾಏಕಿ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಗಾಬರಿಗೊಂಡ ತಾಯಿ ಹಾಗೂ ಕುಟುಂಬದವರು ನೆರೆಹೊರೆಯವರ ಸಹಾಯದಿಂದ ತಕ್ಷಣ ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು.
ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆಂದು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಿದರೂ, ಆಸ್ಪತ್ರೆಗೆ ತಲುಪುವಷ್ಟರಲ್ಲಿ ಬಾಲಕಿ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.
ಈ ದುರ್ಘಟನೆ ಸ್ಥಳೀಯರಲ್ಲಿ ತೀವ್ರ ಶೋಕ ಮೂಡಿಸಿದ್ದು, ಮನೆಯೊಳಗಿನ ಆಟೋಪಕರಣಗಳ ಬಳಕೆಯಲ್ಲಿಯೂ ಪೋಷಕರು ಹೆಚ್ಚುವರಿ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂಬುದನ್ನು ಮತ್ತೊಮ್ಮೆ ಸ್ಮರಿಸಿಸಿದೆ.