

ಡೈಲಿ ವಾರ್ತೆ: ಫೆ./27/2026

ಮಡಿಕೇರಿ: ಪ್ರಚಾರ ವಾಹನದ ಮೇಲೆ ದಾಳಿ – ಹಿಂದೂ ಸಂಘಟನೆ ಕಾರ್ಯಕರ್ತನ ಮೇಲೆ ಹಲ್ಲೆ; ನಾಲ್ವರ ವಿರುದ್ಧ ಎಫ್‌ಐಆರ್, ಓರ್ವ ವಶಕ್ಕೆ

ಮಡಿಕೇರಿ: ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ನಾಪೋಕ್ಲು ಗ್ರಾಮದಲ್ಲಿ ಇಂದು ಸಂಜೆ ಹಿಂದೂ ಸಂಘಟನೆಯ ಕಾರ್ಯಕರ್ತನ ಮೇಲೆ ಅನ್ಯಕೋಮಿನ ಯುವಕರು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಡೆದಿದ್ದು, ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಬಲ್ಲಮಾವಟಿಯಲ್ಲಿ ಶನಿವಾರ ಆಯೋಜಿಸಲಾಗಿರುವ ಬೃಹತ್ ಹಿಂದೂ ಸಮಾವೇಶದ ಪ್ರಚಾರಕ್ಕಾಗಿ ಹಿಂದೂ ಯುವಕರು ಪಿಕ್ ಅಪ್ ವಾಹನದಲ್ಲಿ ಮೈಕ್ ಮೂಲಕ ಪ್ರಕಟಣೆ ಮಾಡುತ್ತಾ ಸಾಗುತ್ತಿದ್ದರು. ಈ ವೇಳೆ ನಾಪೋಕ್ಲು ಪಟ್ಟಣದ ಪೊನ್ನಾಡ್ ಸೂಪರ್ ಮಾರ್ಕೆಟ್ ಮುಂಭಾಗದಲ್ಲಿ ವಾಹನವನ್ನು ತಡೆದ ಅನ್ಯಕೋಮಿನ ಯುವಕರ ಗುಂಪು, “ಇಲ್ಲಿ ಮೈಕಿನಲ್ಲಿ ಪ್ರಕಟಣೆ ಮಾಡಬಾರದು” ಎಂದು ತಗಾದೆ ತೆಗೆದು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಹಿಂದೂ ಸಂಘಟನೆಯ ಕಾರ್ಯಕರ್ತ ಗೌತಮ್ ಅವರನ್ನು ತಕ್ಷಣವೇ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಘಟನೆಯನ್ನು ಖಂಡಿಸಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ನಾಪೋಕ್ಲುವಿನಲ್ಲಿ ಬೃಹತ್ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. “ಕಾಂಗ್ರೆಸ್‌ನ ಪ್ರಭಾವಿ ನಾಯಕರ ಮಕ್ಕಳೇ ಈ ಹಲ್ಲೆಯಲ್ಲಿ ಭಾಗಿಯಾಗಿದ್ದಾರೆ” ಎಂದು ಪ್ರತಿಭಟನಾಕಾರರು ಗಂಭೀರ ಆರೋಪ ಮಾಡಿದ್ದು, ಆರೋಪಿಗಳನ್ನು ತಕ್ಷಣ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ನಾಲ್ವರು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ರಶೀದ್, ಸಿದ್ದಿಕ್, ಸುಹೇಲ್ ಮತ್ತು ರಾಫಿ ಎಂಬವರ ಮೇಲೆ ಪ್ರಕರಣ ದಾಖಲಾಗಿದ್ದು, ಈ ಪೈಕಿ ಸುಹೇಲ್ ಎಂಬಾತನನ್ನು ಪೊಲೀಸರು ಈಗಾಗಲೇ ವಶಕ್ಕೆ ಪಡೆದಿದ್ದಾರೆ. ತಲೆಮರೆಸಿಕೊಂಡಿರುವ ಉಳಿದ ಮೂವರು ಆರೋಪಿಗಳಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ನಾಪೋಕ್ಲುವಿನಲ್ಲಿ ಹೆಚ್ಚಿನ ಪೊಲೀಸ್ ಫೋರ್ಸ್ ನಿಯೋಜಿಸಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ.