

ಡೈಲಿ ವಾರ್ತೆ: ಫೆ./27/2026

ಹೂಡೆ: ಗೆಸ್ಟ್ ಹೌಸ್‌ನಲ್ಲಿ ಆಕಸ್ಮಿಕ ಅಗ್ನಿ ಅವಘಡ –
ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿ

ಉಡುಪಿ: ಇಲ್ಲಿನ ಹೂಡೆ ಸಮೀಪದ ಖಾಸಗಿ ಗೆಸ್ಟ್ ಹೌಸ್‌ವೊಂದರಲ್ಲಿ ಇಂದು ಸಂಜೆ ಆಕಸ್ಮಿಕವಾಗಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಕಟ್ಟಡವು ಸಂಪೂರ್ಣವಾಗಿ ಹಾನಿಗೊಳಗಾದ ಘಟನೆ ನಡೆದಿದೆ.

ಗೆಸ್ಟ್ ಹೌಸ್‌ನಲ್ಲಿ ಅಳವಡಿಸಲಾಗಿದ್ದ ಎಸಿ ಮೆಷಿನ್‌ನಲ್ಲಿ ಉಂಟಾದ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ. ಕ್ಷಣಾರ್ಧದಲ್ಲಿ ಬೆಂಕಿಯು ಇಡೀ ಕಟ್ಟಡವನ್ನು ಆವರಿಸಿಕೊಂಡಿದ್ದರಿಂದ, ಒಳಭಾಗದಲ್ಲಿದ್ದ ಪೀಠೋಪಕರಣಗಳು, ಎಲೆಕ್ಟ್ರಾನಿಕ್ ಉಪಕರಣಗಳು ಹಾಗೂ ಇತರ ಬೆಲೆಬಾಳುವ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ.
ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಬೆಂಕಿ ಕಾಣಿಸಿಕೊಂಡ ಸಂದರ್ಭ ಗೆಸ್ಟ್ ಹೌಸ್‌ನಲ್ಲಿ ಪ್ರವಾಸಿಗರು ಯಾರೂ ಇಲ್ಲದ ಕಾರಣ ದೊಡ್ಡ ದುರಂತ ತಪ್ಪಿದೆ. ಆದರೆ ಆಸ್ತಿಪಾಸ್ತಿಗೆ ಭಾರಿ ನಷ್ಟವುಂಟಾಗಿದೆ ಎಂದು ಅಂದಾಜಿಸಲಾಗಿದೆ.

ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಮಲ್ಪೆಯ ಅಗ್ನಿಶಾಮಕ ದಳದ ಸಿಬ್ಬಂದಿಗಳು ತಕ್ಷಣ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸಿದರು. ಅಗ್ನಿಶಾಮಕ ದಳದ ಹರಸಾಹಸದ ನಂತರ ಬೆಂಕಿಯನ್ನು ನಂದಿಸುವಲ್ಲಿ ತಂಡವು ಯಶಸ್ವಿಯಾಗಿದೆ. ಇದರಿಂದಾಗಿ ಬೆಂಕಿ ಪಕ್ಕದ ಕಟ್ಟಡಗಳಿಗೆ ಹರಡುವುದು ತಪ್ಪಿದಂತಾಗಿದೆ.
ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.