

ಡೈಲಿ ವಾರ್ತೆ: ಮಾ./01/2026

ಕೋಟೇಶ್ವರ: ಬಾರ್‌ನಲ್ಲಿ ರಿಕ್ಷಾ ಚಾಲಕನ ಮೇಲೆ ಬಿಯರ್ ಬಾಟಲಿಯಿಂದ ಮಾರಣಾಂತಿಕ ಹಲ್ಲೆ – ಮೂವರ ವಿರುದ್ಧ ಪ್ರಕರಣ ದಾಖಲು

ಕುಂದಾಪುರ: ಇಲ್ಲಿನ ಕೋಟೇಶ್ವರದ ಪ್ರೀತಮ್ ಬಾರ್‌ನಲ್ಲಿ ಊಟ ಮಾಡುತ್ತಿದ್ದ ರಿಕ್ಷಾ ಚಾಲಕನ ಮೇಲೆ ಹಳೆಯ ಪರಿಚಯಸ್ಥರೇ ಸೇರಿಕೊಂಡು ಬಿಯರ್ ಹಾಗೂ ಸೋಡಾ ಬಾಟಲಿಯಿಂದ ಹಲ್ಲೆ ನಡೆಸಿ, ಕೊಲೆಗೆ ಯತ್ನಿಸಿರುವ ಘಟನೆ ನಡೆದಿದೆ.
ಬೀಜಾಡಿ ಗ್ರಾಮದ ನಿವಾಸಿ, ರಿಕ್ಷಾ ಚಾಲಕ ಚಂದ್ರ ಎನ್. (41) ಅವರು ದಿನಾಂಕ ಫೆ.28 ರಂದು ರಾತ್ರಿ ತಮ್ಮ ಪತ್ನಿಯನ್ನು ಅಂಕದಕಟ್ಟೆಗೆ ಬಿಟ್ಟು, ಊಟಕ್ಕಾಗಿ ಕೋಟೇಶ್ವರದ ಪ್ರೀತಮ್ ಬಾರ್‌ಗೆ ತೆರಳಿದ್ದರು. ರಾತ್ರಿ ಸುಮಾರು 10:00 ಗಂಟೆಯ ಹೊತ್ತಿಗೆ ಅಲ್ಲಿಗೆ ಬಂದ ಚಂದ್ರ ಅವರ ಪರಿಚಯದವರೇ ಆದ ಹಳವಳ್ಳಿ ಕುಂಬ್ರಿ ನಿವಾಸಿಗಳಾದ ಭರತ್ ಬಂಗೇರ, ಸತೀಶ ಮತ್ತು ಸಚೀನ್ ಎಂಬುವವರು ಏಕಾಏಕಿ ಅವಾಚ್ಯ ಶಬ್ದಗಳಿಂದ ಬೈಯಲು ಶುರು ಮಾಡಿದ್ದಾರೆ.
ಯಾಕೆ ಬೈಯುತ್ತೀರಿ ಎಂದು ಪ್ರಶ್ನಿಸಿದ್ದಕ್ಕೆ ಆಕ್ರೋಶಗೊಂಡ ಆರೋಪಿ ಸತೀಶನು ಚಂದ್ರ ಅವರ ಕುತ್ತಿಗೆ ಒತ್ತಿ ಹಿಡಿದು ಕೈಯಿಂದ ಹಲ್ಲೆ ನಡೆಸಿದ್ದಾನೆ. ಇದೇ ವೇಳೆ ಭರತ್ ಬಂಗೇರನು ತನ್ನ ಕೈಯಲ್ಲಿದ್ದ ಬಿಯರ್ ಬಾಟಲಿಯಿಂದ ಚಂದ್ರ ಅವರ ತಲೆಯ ಮುಂಭಾಗ ಹಾಗೂ ಮುಖಕ್ಕೆ ಬಲವಾಗಿ ಹೊಡೆದಿದ್ದಾನೆ. ಇದರಿಂದಾಗಿ ಚಂದ್ರ ಅವರ ಮುಖ ಹಾಗೂ ಹಣೆಯ ಭಾಗದಲ್ಲಿ ತೀವ್ರ ರಕ್ತಗಾಯಗಳಾಗಿವೆ. ಅಲ್ಲದೆ, ಸತೀಶ ಎಂಬಾತ ಸೋಡಾ ಬಾಟಲಿಯಿಂದ ಚಂದ್ರ ಅವರ ಎಡ ಭುಜಕ್ಕೆ ಹೊಡೆದು ಗಾಯಗೊಳಿಸಿದ್ದಾನೆ.
ಬಾರ್‌ನಿಂದ ಹೊರಬಂದ ಮೇಲೆಯೂ ಬಿಡದ ಈ ಮೂವರು ಆರೋಪಿಗಳು ಚಂದ್ರ ಅವರನ್ನು ರಸ್ತೆಯಲ್ಲಿ ಹಾಕಿ ಕಾಲಿನಿಂದ ತುಳಿದು, ಕೈಗಳಿಂದ ಮನಬಂದಂತೆ ಹಲ್ಲೆ ನಡೆಸಿದ್ದಾರೆ. “ನಿನ್ನನ್ನು ಕೊಲೆ ಮಾಡಿಯೇ ತೀರುತ್ತೇವೆ” ಎಂದು ಬೆದರಿಕೆ ಹಾಕುತ್ತಾ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಪರಿಣಾಮವಾಗಿ ಚಂದ್ರ ಅವರ ಬಟ್ಟೆಗಳು ರಕ್ತಸಿಕ್ತವಾಗಿದ್ದವು.
ಈ ಕುರಿತು ಚಂದ್ರ ಅವರು ನೀಡಿದ ದೂರಿನನ್ವಯ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಅಪರಾಧ ಕ್ರಮಾಂಕ 18/2026 ರಂತೆ, ಭಾರತೀಯ ನ್ಯಾಯ ಸಂಹಿತೆಯ (BNS) ಕಲಂ 352, 109, 115(2), 118(1) ಹಾಗೂ R/W 3(5) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.