

ಡೈಲಿ ವಾರ್ತೆ: ಮಾ./02/2026

ಇರಾನ್‌ನಲ್ಲಿ ಖಮೇನಿ ಹತ್ಯೆಯಾದ ಎರಡು ದಿನಗಳ ಬಳಿಕ ಪತ್ನಿ ಮನ್ಸೌರೆ ಮೃತ್ಯು: ಅಮೆರಿಕ-ಇಸ್ರೇಲ್ ಜಂಟಿ ದಾಳಿಗೆ ಇಡೀ ಕುಟುಂಬವೇ ಬಲಿ!

ಟೆಹ್ರಾನ್: ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಸಾವಿನ ಬೆನ್ನಲ್ಲೇ, ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರ ಪತ್ನಿ ಮನ್ಸೌರೆ ಖೋಜಸ್ತೆಹ್ (78) ಸೋಮವಾರ (ಮಾ.2) ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.
ಈ ಮೂಲಕ ಇರಾನ್‌ನ ಅತ್ಯಂತ ಪ್ರಭಾವಿ ರಾಜಕೀಯ ಕುಟುಂಬದ ಒಂದು ಅಧ್ಯಾಯ ಅಮೆರಿಕ ಮತ್ತು ಇಸ್ರೇಲ್‌ನ ಭೀಕರ ವೈಮಾನಿಕ ದಾಳಿಗೆ ಸಂಪೂರ್ಣವಾಗಿ ನಾಶವಾದಂತಾಗಿದೆ.
ಎರಡು ದಿನಗಳ ಹಿಂದೆ ಟೆಹ್ರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಅನಿರೀಕ್ಷಿತ ಜಂಟಿ ದಾಳಿಯಲ್ಲಿ ಅಲಿ ಖಮೇನಿ, ಅವರ ಮಗಳು, ಅಳಿಯ ಹಾಗೂ ಮೊಮ್ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಅಂದು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಖೋಜಸ್ತೆಹ್ ಅವರು ಇಂದು ಮೃತಪಟ್ಟಿದ್ದಾರೆ ಎಂದು ಇರಾನ್ ಮಾಧ್ಯಮಗಳು ಅತ್ಯಂತ ದುಃಖದಾಯಕವಾಗಿ ವರದಿ ಮಾಡಿವೆ.
ವಿಫಲವಾದ ಚೀನಾ ತಂತ್ರಜ್ಞಾನ: ಕಣ್ಮುಚ್ಚಿದ HQ-9B
ತನ್ನ ಮೇಲೆ ದಾಳಿಯಾಗುವ ಮುನ್ಸೂಚನೆ ಅರಿತಿದ್ದ ಇರಾನ್, ಸುರಕ್ಷತೆಗಾಗಿ ಚೀನಾದಿಂದ ಅತ್ಯಾಧುನಿಕ HQ-9B ವಾಯು ರಕ್ಷಣಾ ವ್ಯವಸ್ಥೆಯನ್ನು ಖರೀದಿಸಿತ್ತು. ಆದರೆ, ಅಮೆರಿಕ ಮತ್ತು ಇಸ್ರೇಲ್‌ನ ಸ್ಟೆಲ್ತ್ ಯುದ್ಧ ವಿಮಾನಗಳನ್ನು ಪತ್ತೆಹಚ್ಚುವಲ್ಲಿ ಈ ರಕ್ಷಣಾ ಕವಚ ಸಂಪೂರ್ಣವಾಗಿ ವಿಫಲವಾಯಿತು. ಈ ತಾಂತ್ರಿಕ ಸೋಲು ಇರಾನ್‌ನ ಸರ್ವೋಚ್ಚ ನಾಯಕ ಮತ್ತು ಅವರ ಮಿಲಿಟರಿ ಕಮಾಂಡರ್‌ಗಳ ಪ್ರಾಣಕ್ಕೆ ಸಂಚಕಾರ ತಂದಿತು.
ಟ್ರಂಪ್ ಘೋಷಣೆ ಬೆನ್ನಲ್ಲೇ ಅಧಿಕೃತ ಮುದ್ರೆ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಖಮೇನಿ ಸಾವನ್ನು ಅಧಿಕೃತವಾಗಿ ಘೋಷಿಸಿದ ಗಂಟೆಗಳ ನಂತರ ಇರಾನ್ ಸರ್ಕಾರ ಈ ಸುದ್ದಿಯನ್ನು ಖಚಿತಪಡಿಸಿತ್ತು. ಸದ್ಯ ಟೆಹ್ರಾನ್ ಸ್ಮಶಾನ ಮೌನಕ್ಕೆ ಶರಣಾಗಿದ್ದು, ಇರಾನ್‌ನ ಭವಿಷ್ಯದ ನಾಯಕತ್ವ ಯಾರು ಎಂಬ ಪ್ರಶ್ನೆ ಇಡೀ ವಿಶ್ವದ ಕುತೂಹಲಕ್ಕೆ ಕಾರಣವಾಗಿದೆ.