ಡೈಲಿ ವಾರ್ತೆ: ಮಾ./03/2026

ಇರಾನ್ ಮೇಲೆ ಯುದ್ಧದ ಕಾರ್ಮೋಡ: ಇಸ್ರೇಲ್-ಅಮೆರಿಕ ದಾಳಿ ನಡುವೆಯೇ ನಡುಗಿದ ಭೂಮಿ!

​ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಯುದ್ಧದ ಜ್ವಾrಲೆ ಧಗಧಗಿಸುತ್ತಿರುವ ಬೆನ್ನಲ್ಲೇ ಇರಾನ್‌ನಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಅಮೆರಿಕ ಹಾಗೂ ಇಸ್ರೇಲ್ ಸೇನೆಗಳು ಜಂಟಿಯಾಗಿ ಇರಾನ್ ಮೇಲೆ ಸರಣಿ ದಾಳಿ ನಡೆಸುತ್ತಿರುವ ಹೊತ್ತಲ್ಲೇ ಸಂಭವಿಸಿದ ಈ ಭೂಕಂಪ ಪ್ರಾದೇಶಿಕ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ.

​ಇರಾನ್‌ನ ಗೆರಾಶ್ ಪ್ರದೇಶವನ್ನು ಕೇಂದ್ರಬಿಂದುವಾಗಿಸಿಕೊಂಡು ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಮಿಯ ಆಳದಲ್ಲಿ ಸುಮಾರು 10 ಕಿ.ಮೀ ವರೆಗೆ ಈ ಕಂಪನ ಕಂಡುಬಂದಿದೆ. ಈಗಾಗಲೇ ವಾಯುದಾಳಿಗಳಿಂದ ಕಂಗೆಟ್ಟಿರುವ ಜನರಿಗೆ ಈ ನೈಸರ್ಗಿಕ ವಿಕೋಪ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸದ್ಯಕ್ಕೆ ಸಾವು-ನೋವುಗಳ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ.

​ಕಳೆದ ಭಾನುವಾರ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ಏರ್‌ಸ್ಟ್ರೈಕ್‌ನಲ್ಲಿ ಇರಾನ್‌ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಸಾವನ್ನಪ್ಪಿರುವುದು ಇಡೀ ಮುಸ್ಲಿಂ ಜಗತ್ತಿನಲ್ಲಿ ಸಂಚಲನ ಮೂಡಿಸಿದೆ. ಇರಾನ್‌ನ ಮಿಲಿಟರಿ ನೆಲೆಗಳು ಮತ್ತು ಆಯಕಟ್ಟಿನ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿಗಳನ್ನು ನಡೆಸಲಾಗಿದ್ದು, ಇದು ಮಧ್ಯಪ್ರಾಚ್ಯದಲ್ಲಿ ಭಾರಿ ಪ್ರತೀಕಾರದ ಕಿಚ್ಚು ಹಚ್ಚಿದೆ.

​ಟ್ರಂಪ್ ಎಚ್ಚರಿಕೆ:
​ಇದೇ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಠಿಣ ಸಂದೇಶ ರವಾನಿಸಿದ್ದಾರೆ. “ಇರಾನ್ ವಿರುದ್ಧದ ಮಿಲಿಟರಿ ಕಾರ್ಯಾಚರಣೆಯನ್ನು ಮುಂದಿನ 4 ರಿಂದ 5 ವಾರಗಳ ಕಾಲ ಸತತವಾಗಿ ಮುಂದುವರಿಸುವ ಸಾಮರ್ಥ್ಯ ಅಮೆರಿಕಕ್ಕಿದೆ” ಎಂದು ಹೇಳುವ ಮೂಲಕ ಯುದ್ಧ ನಿಲ್ಲುವ ಲಕ್ಷಣಗಳಿಲ್ಲ ಎಂಬ ಸೂಚನೆ ನೀಡಿದ್ದಾರೆ.